ವೀರಮಣಿ ಕಥಾ….

null

ವೀರಮಣಿ ಕಥಾ….ಅವನು ಚೆನ್ನೈನ ಹುಡುಗ. ಹೆಸರು ವೀರಮಣಿ. ಉದ್ದಕ್ಕಿದ್ದ. ಒಂದಿಷ್ಟು ದಪ್ಪಕ್ಕಿದ್ದ ಮತ್ತು ತುಂಬಾನೇ ಚೆಂದಕ್ಕಿದ್ದ. ಮಧುರವಾಗಿ ಹಾಡುತ್ತಿದ್ದ ಕೂಡಾ. ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಬೆಂಗಳೂರಿಗೆ ಬಂದವನು ಬೇಗ ಕನ್ನಡ ಕಲಿತ. ಶುದ್ಧ ಇಂಗ್ಲಿಷ್ ಕಲಿತ. ಈ ಬಡಾ ಬೆಂಗಳೂರಲ್ಲಿ ಬದುಕುವುದು ಹೇಗೆಂಬುದನ್ನೂ ಕಲಿತ.ಹಾಡು ಕೇಳುವ ಮತ್ತು ಹಾಡು ಹೇಳುವ ಅಭ್ಯಾಸವಿತ್ತಲ್ಲ? ಸೀದಾ ಜಯನಗರದ ಸಿ.ಡಿ. ಮಾರಾಟದ ಅಂಗಡಿಗೆ ಬಂದ. ಶಾಸ್ತ್ರೀಯ ಸಂಗೀತ, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಭಾವಗೀತೆ, ಭಕ್ತಿಗೀತೆ, ಜನಪದ ಗೀತೆಗಳ ಸಿ.ಡಿ.ಗಳನ್ನು ಹುಡುಕುತ್ತ ನಿಂತವನಿಗೆ ಅಂಗಡಿಯ ಕೌಂಟರಿನಲ್ಲಿ ಕೂತಿದ್ದ ಆಕೆ ಕಾಣಿಸಿದಳು. ಅವಳನ್ನು ನೋಡಿದೇ ತಡ, ಮಣಿ ಹಾಡು ಮರೆತ. ಮಾತು ಮರೆತ. ಅಂಗಡಿಯನ್ನು ಮರೆತ. ಯಾವುದೋ ಮೋಡಿಗೆ ಒಳಗಾದವನಂತೆ ಆಕೆಯ ಮುಂದೆ ಹೋಗಿ ನಿಂತು ಬಿಟ್ಟ!ಎದುರು ನಿಂತ ಚೆಲುವಾಂತ ಚೆನ್ನಿಗನನ್ನು ಕಂಡು ಆ ಬೆಳದಿಂಗಳ ಬಾಲೆಯೂ ಮೈಮರೆತಳು. ಅವರಿಬ್ಬರೂ ಮೌನವಾಗಿದ್ದರು ನಿಜ. ಆದರೆ, ಕಣ್ಣುಗಳು ಮಾತಾಡಿಕೊಂಡವು. ಹೃದಯಗಳು ಜತೆಯಾಗಿ ಮಿಡಿದವು. ಲವ್ ಅಟ್ ಫಸ್ಟ್ ಸೈಟ್ ಎಂಬುದು ಇಬ್ಬರ ಪಾಲಿಗೂ ನಿಜವಾಯಿತು. ಒಲವೆಂಬುದು ಯುಮುನೆಯಂತೆ ಹರಿಯುತ್ತಿದ್ದಾಗಲೇ ಆಕೆ ಮೆಲುವಾಗಿ ‘ಮೈ ನೇಮ್ ಈಸ್ ಗೀತಾಂಜಲಿ….’ ಅಂದಳು. ‘ಮಣಿ ಹಿಯರ್’ ಅಂದ ಈ ಭೂಪ. ಆ ನಂತರವೂ ಅವರಿಬ್ಬರೂ ಮಾತೇ ಆಡದೆ ನಿಂತಾಗ ಆ ಅಂಗಡಿಯಲ್ಲಿ ಹಾಡೊಂದು ತೇಲಿಬಂತು! “ಹೃದಯದಲಿ ಇದೇನಿದೂ… ನದಿಯೊಂದು ಓಡಿದೆ…

’ಅಂದಿನಿಂದ ವೀರಮಣಿ ದಿನವೂ ಆ ಮ್ಯೂಸಿಕ್ ಅಂಗಡಿಗೆ ಹೋಗಲು ಶುರುವಿಟ್ಟ. ಪ್ರತಿ ದಿನವೂ ಯಾವುದಾದರೊಂದು ಸಿ.ಡಿ. ಖರೀದಿಸುತ್ತಿದ್ದ, ಗೀತಾಂಜಲಿಯನ್ನು ನೋಡಿದರೆ ಸಾಕು, ಆತನ ಎದೆ ಹಗುರಾಗುತ್ತಿತ್ತು. ಮನಸು ನದಿಯಾಗುತ್ತಿತ್ತು. ಒಲವೆಂಬ ಲತೆ ಜತೆಗೇ ನಿಲ್ಲುತ್ತಿತ್ತು. ಅದೆಷ್ಟೋ ಬಾರಿ ‘ಐ ಲವ್ ಯೂ’ ಎಂಬ ಮಾತು ಬಾಯ್ತುದಿಗೆ ಬಂದು ನಿಂತು ಹೋಗುತ್ತಿತ್ತು. ‘ಐ ಲವ್‌ಯೂ’ ಅಂದ ಮರುಕ್ಷಣ ಆಕೆ ನಿರಾಕರಿಸಿಬಿಟ್ಟರೆ? ಗೆಳೆತನಕ್ಕೇ ಗುಡ್‌ಬೈ ಅಂದು ಬಿಟ್ಟರೆ? ಮಾತಾಡುವುದನ್ನೇ ನಿಲ್ಲಿಸಿ ಬಿಟ್ಟರೆ… ಇಂಥದೊಂದು ಅನುಮಾನ ಮಣಿಯನ್ನು ಸದಾ ಕಾಡುತ್ತಿತ್ತು. ಆದ್ದರಿಂದಲೇ ಆತ ತನ್ನ ಪ್ರೀತಿಯ ಬಗ್ಗೆ ಮಾತೇ ಆಡದೆ ಉಳಿದ.ಗೀತಾಂಜಲಿ ಪ್ರತಿ ದಿನವೂ ಅವನಿಗೆ ಸಿ.ಡಿ. ಪ್ಯಾಕ್ ಮಾಡಿ ಕೊಡುತ್ತಿದ್ದಳಲ್ಲ? ಆಗೆಲ್ಲ ಒಂದೊಂದು ಸಿ.ಡಿ.ಗೂ ಒಂದೊಂದು ಪುಟ್ಟ ಚೀಟಿ ಹಾಕುತ್ತಿದ್ದಳು. ಅವನನ್ನು ಬೀಳ್ಕೊಡುವ ಮುನ್ನ ಮಲ್ಲಿಗೆಯಂತೆ ನಗುತ್ತಿದ್ದಳು. ಮರುದಿನ ಮಣಿ ದೊಡ್ಡ ನಗೆಯೊಂದಿಗೆ ಅವಳೆಡೆಗೆ ಬರುತ್ತಿದ್ದ. ನೀನು ರಮಣಿ. ನಾನು ಮಣಿ ಎಂದು ನಗುತ್ತಿದ್ದ. ಅವಳಿಗೆ ಕಾಫಿ ಕುಡಿಸುತ್ತಿದ್ದ. ತಿಂಡಿ ತಿನ್ನಿಸುತ್ತಿದ್ದ. ಸುಖ-ದುಃಖ ವಿಚಾರಿಸುತ್ತಿದ್ದ. ‘ಐ ಲವ್‌ಯೂ’ ಎಂಬುದನ್ನು ಬಿಟ್ಟು ಉಳಿದೆಲ್ಲ ಮಾತುಗಳೂ ಇಬ್ಬರ ಮಧ್ಯೆ ಹೊಳೆಯಂತೆ ಹರಿದವು.ಹೀಗಿದ್ದಾಗಲೇ ಅದೊಮ್ಮೆ ಅನಿವಾರ್‍ಯವಾಗಿ ಮಣಿ ಚೆನ್ನೈಗೆ ಹೋಗಬೇಕಾಗಿ ಬಂತು. ಹೋಗುವ ಮುನ್ನ ಆತ ಗೀತಾಂಜಲಿಯನ್ನು ಕಂಡ. ವಿಷಯ ತಿಳಿಸಿದ. ಮೂರೇ ದಿನ ಅಷ್ಟೆ. ನಾಲ್ಕನೇ ದಿನ ನಿನ್ನ ಬಳಿಗೆ ಹಾರಿ ಬರ್‍ತೀನಿ, ದಿನಾದಿನ ಫೋನ್ ಮಾಡ್ತಿರು ಅಂದು ಫೋನ್ ನಂಬರು ಕೊಟ್ಟ. ಆತ ಹೋಗಿ ಒಂದು ದಿನ ಕಳೆದಿತ್ತು, ಅಷ್ಟೆ. ಗೀತೆಯಂಥ ಗೀತಾಂಜಲಿಗೆ ಅವನಿಲ್ಲದ ಕ್ಷಣ ಅಸಹನೀಯ ಅನ್ನಿಸಿತು. ಆಕೆ ಅವಸರದಿಂದ ಫೋನ್ ಮಾಡಿದಳು. ಅವನು ‘ಹಲೋ’ ಅಂದಾಕ್ಷಣ ‘ಮಣೀ, ತುಂಬ ಒಂಟಿ ಅನ್ನಿಸ್ತಿದೆ ನಂಗೆ, ಐ ಮಿಸ್ ಯೂ ಕಣೋ…’ ಅಂದು ಬಿಕ್ಕಿದಳು.ಮಣಿ ಗಾಬರಿಯಾದ. ಬಿಟ್ಟ ಬಾಣದಂತೆ ಬೆಂಗಳೂರಿಗೆ, ಅಲ್ಲಲ್ಲ, ಜಯನಗರದ ಅದೇ ಸಿ.ಡಿ. ಅಂಗಡಿಗೆ ಓಡಿಬಂದ. ಅವನನ್ನು ಕಂಡದ್ದೇ ಗೀತಾಂಜಲಿಯ ಎದೆಯಲ್ಲಿ ಗುಲಾಬಿ ಅರಳಿತ್ತು. ದೊಡ್ಡ ಸಂಭ್ರಮದಿಂದ ಅವನೆದುರು ನಿಂತಾಗ ಇಬ್ಬರ ಎದೆಯಲ್ಲೂ ಮಿಡಿದದ್ದು ಒಂದೇ ಹಾಡು: “ಮೆಲ್ಲುಸಿರೀ ಸವಿಗಾನ, ಎದೆ ಝಲ್ಲೆನೆ ಹೂವಿನ ಬಾಣ….

’ಯಾಕೋಪ್ಪ, ಚೆನ್ನೈನಿಂದ ಬಂದ ವಾರದ ನಂತರ ಮಣಿ ಮಂಕಾದ. ವಿಪರೀತ ಕೆಮ್ಮುತ್ತಿದ್ದ. ತಲೆನೋವೆಂದು ನರಳುತ್ತಿದ್ದ. ಈ ಮಧ್ಯೆಯೂ ತಪ್ಪದೆ ಸಿ.ಡಿ. ಖರೀದಿಸುತ್ತಿದ್ದ. ಗೀತಾಂಜಲಿಯನ್ನು ನಗಿಸುತ್ತಿದ್ದ. ತಾನೂ ನಲಿಯುತ್ತಿದ್ದ. ಆಗಲೂ ಗೀತಾಂಜಲಿ ಒಂದೊಂದು ಸಿ.ಡಿ. ಗೂ ಒಂದೊಂದು ಪುಟ್ಟ ಪತ್ರ ಹಾಕಿ ಪ್ಯಾಕ್ ಮಾಡುತ್ತಿದ್ದಳು. ಮೋಹಕವಾಗಿ ನಗುತ್ತಾ….ಅವತ್ತು ಮಂಗಳವಾರ. ಮಣಿ ಕೆಲಸ ಮುಗಿಸಿ, ಸಿ.ಡಿ. ಖರೀದಿಸಿ ರೂಮಿಗೆ ಬಂದು ಅರ್ಧ ಗಂಟೆಯೂ ಕಳೆದಿರಲಿಲ್ಲ. ಇದ್ದಕ್ಕಿದ್ದಂತೆ ಕೆಮ್ಮು ವಿಪರೀತವಾಯಿತು. ಮಣಿ ಆಸ್ಪತ್ರೆಗೆ ಹೋದ. ಅವನನ್ನು ಎರಡೆರಡು ಬಾರಿ ಪರೀಕ್ಷಿಸಿದ ವೈದ್ಯರು ಬೆಚ್ಚಿ ಉದ್ಗರಿಸಿದರು. ಮೈ ಗಾಡ್, ಕ್ಯಾನ್ಸರ್!ನಾನಿನ್ನು ಹೆಚ್ಚು ದಿನ ಬದುಕಲಾರೆ ಅನಿಸಿದ್ದೇ ತಡ, ಮಣಿ ಮೌನವಾದ. ಈ ಕೆಟ್ಟ ಸುದ್ದಿ ತಿಳಿಸಿ ಹೂವಿನಂಥ ಗೀತಾಂಜಲಿಗೆ ನೋವು ಕೊಡುವುದೇ ಬೇಡ. ಆಕೆ ಹೂವಿನಂಥವಳು. ದೇವರಂಥವಳು. ಅಮ್ಮನಂಥ ಪ್ರೀತಿಯವಳು. ನನ್ನ ಪ್ರೀತಿ ಅವಳಿಗೆ ಗೊತ್ತಾಗುವುದೇ ಬೇಡ. ನನ್ನ ಸಂಕಟದಿಂದ ಆಕೆ ಡಿಸ್ಟರ್ಬ್ ಆಗುವುದೂ ಬೇಡ. ಆಕೆ ಚನ್ನಾಗಿರಲಿ ಅಂದುಕೊಂಡವನೇ ಯಾರಿಗೂ ಹೇಳದೆ ಕೇಳದೆ ಚೆನ್ನೈಗೆ ಬಂದುಬಿಟ್ಟ.ಅವನ ಜತೆಯಿಲ್ಲದೆ ವಾರವಾಯಿತು. ತಿಂಗಳೂ ಕಳೆಯಿತು. ಗೀತಾಂಜಲಿ ಕೊರಗಿ, ಸೊರಗಿ, ಕರಗಿ, ಹುಚ್ಚಿಯಂತಾದಳು. ಕಡೆಗೆ ಅವನ ನಂಬರಿಗೆ ಫೋನು ಮಾಡಿ ‘ಮಣೀ, ಐಲವ್‌ಯೂ’ ಎಂದು ಚೀರಿದಳು. ಆ ಕಡೆಯಿಂದ ಉತ್ತರ ಬರಲಿಲ್ಲ. ಈ ಹುಡುಗಿ ಗಡಿಬಿಡಿಯಿಂದ ಸೀದಾ ಚೆನ್ನೈಗೇ ಧಾವಿಸಿದಳು.ಹರಸಾಹಸ ಮಾಡಿ ಅವನ ಮನೆ ಹುಡುಕಿದರೆ ಅಲ್ಲೇನಿದೆ ? ಮಣಿ ಸತ್ತುಹೋಗಿದ್ದ, ಗೀತಾಂಜಲಿ ನೀಡಿದ್ದ ಸಿ.ಡಿ.ಗಳೆಲ್ಲ ಚೆನ್ನೈನ ಅವನ ಮನೆಯಲ್ಲಿದ್ದವು. ಅವುಗಳನ್ನು ಆತ ಬಿಚ್ಚಿರಲೇ ಇಲ್ಲ. ಬದಲಿಗೆ ಒಪ್ಪವಾಗಿ ಜೋಡಿಸಿಟ್ಟು ಅವುಗಳ ಮೇಲೊಂದು ಚೀಟಿ ಇರಿಸಿದ್ದ. ಅದರಲ್ಲಿ “ಗೆಳತಿ, ನಿನ್ನೊಂದಿಗೆ ಬದುಕುವ ಆಸೆಯಿತ್ತು. ಆದರೆ ಅದನ್ನು ಹೇಳುವ ಧೈರ್‍ಯವಿರಲಿಲ್ಲ. ನಿನ್ನ ನೆನಪು ಜತೆಗಿರಬೇಕು ಅನ್ನಿಸಿತು. ಹಾಗೆಂದೇ ಈ ಸಿ.ಡಿ.ಗಳನ್ನು ಒಡೆಯಲೇ ಇಲ್ಲ. ಇಲ್ಲೆಲ್ಲ ನಿನ್ನ ಅಂಗೈನ ಗುರುತಿದೆ. ಈ ಬದುಕಿಗೆ ಗುಡ್‌ಬೈ ಹೇಳುವ ಮುನ್ನ ಕಡೆಯ ಮಾತು ಹೇಳುವುದಿದೆ-ಐ ಲವ್ ಯೂ….’ಅಂದಹಾಗೆ, ನಿನ್ನಿಂದ “ಐ ಲವ್‌ಯೂ’ ಅನ್ನಿಸ್ಕೋಬೇಕು ಅನ್ನೋ ಹಿರಿಯಾಸೆಯಿದೆ! ನಿಂಗೆ ಇಷ್ಟವಿಲ್ಲದಿದ್ರೂ…. ಪ್ಲೀಸ್, ನನ್ನ ಸಮಾಧಾನಕ್ಕಾಗಿ ಒಂದ್ಸಲ, ಒಂದೇ ಒಂದ್ಸಲ ಐ ಲವ್ ಯೂ ಅಂತೀಯ ಗೀತಾ….?ಈ ಪತ್ರ ಓದಿ ಗೀತಾಂಜಲಿ ಬಿಕ್ಕಿದಳು. ಬಿಕ್ಕುತ್ತಲೇ ಅಂದಳು-ಮಣೀ, ನಾನೂ ಅಷ್ಟೇ, ನಿನ್ನನ್ನು ಮೌನವಾಗಿ ಪ್ರೀತಿಸುತ್ತಿದ್ದೆ. ನಿಂಗೆ ದಿನಕ್ಕೊಂದು ಪ್ರೇಮ ಪತ್ರ ಬರೀತಿದ್ದೆ. ಅದನ್ನು ದಿನಾಲೂ ಸಿ.ಡಿ. ಒಳಕ್ಕೆ ಹಾಕ್ತಾ ಇದ್ದೆ. ಈ ಬದುಕು ನಿನಗಾಗಿ ಅಂದುಕೊಂಡೇ ಉಳಿದಿದ್ದೆ. ಆದರೆ,….ನೀತಿ: ಯಾರಿಗೇ ಆಗಲಿ, ಹೇಳಬೇಕು ಅನಿಸಿದ್ದನ್ನು ನೇರವಾಗಿ ಹೇಳಿಬಿಡಿ!

ನೀನು ತಡವಾಗಿ ಒಪ್ಪಿಕೋ… ಪರವಾಗಿಲ್ಲ!

null

ನೀನೇ ಮುಂದಾಗಿ “ಐ ಲವ್ ಯೂ’ ಎಂದು ಹೇಳುವವರೆಗೂ ನಾನು ನಿನ್ನ ಕೈ ಮುಟ್ಟಲಾರೆ. ನಿನ್ನೆದುರು ನಿಂತು ಪೆದ್ದುನೀನು ತಡವಾಗಿ ಒಪ್ಪಿಕೋ… ಪರವಾಗಿಲ್ಲ! ಪೆದ್ದಾಗಿ ನಗಲಾರೆ. ನಿನ್ನ ಒಪ್ಪಿಗೆ ತಡವಾಗಿಯೇ ಸಿಕ್ಕರೂ ಅಂಥ ತೊಂದರೆ, ನಷ್ಟ ಯಾವುದೂ ನನಗಿಲ್ಲ….

ಡಿಯರ್ ಜೋ…

ಹೇಗಿದ್ದೀಯ? ಏನ್ ಮಾಡ್ತಾ ಇದೀಯ? ಪರೀಕ್ಷೆಗೆ ವಿಪರೀತ ಓದ್ತಾ ಇದೀಯ ಅಂತ ಕಾಣ್ತಿದೆ. ಈಗಾಗ್ಲೇ ಮೂರು ಪೇಪರ್ ಮುಗಿದು ಹೋದ್ರೂ, ನೀನು ಒಂದೇ ಒಂದು ಸಂಜೆಯಾದ್ರೂ ನಂಗೆ ಸಿಗಲೇ ಇಲ್ವಲ್ಲ ಜೋ…? ಇದು ಸರಿಯೇನೆ ಚಿನ್ನಾ?
ನಂಗೆ ಸುಳ್ಳು ಹೇಳಿ ಗೊತ್ತಿಲ್ಲ. ನಿನ್ನ ಜತೆ ಸುಳ್ಳು ಹೇಳಿ ಸಾಧಿಸಬೇಕಿರೋದು ಕೂಡ ಏನೂ ಇಲ್ಲ. ಹೇಳ್ತೀನಿ ಕೇಳು. ಕಳೆದ ಆರು ತಿಂಗಳಿಂದ ಒಳಗೊಳಗೇ ನಿನ್ನನ್ನು ಪ್ರೀತಿಸ್ತಾ ಇದೀನಿ ನಿಜ. ಆದರೆ, ಈಗ ನಾಲ್ಕು ದಿನದಿಂದ ನಾನು ನಿನ್ನ ಹಿಂದೆ ಬಿದ್ದಿದೀನಿ. ದಿನಾ ರಾತ್ರಿ ೧೦ ಗಂಟೆಯಿಂದ ಹನ್ನೆರಡೂವರೆಗೆ ನಿನ್ನ ರೂಂನ ಲೈಟ್ ಆರಿ ಹೋಗುತ್ತೆ ನೋಡು, ಅಷ್ಟು ಹೊತ್ತಿನ ತನಕ ನಿಮ್ಮ ಮನೆ ಎದುರಿನ ಪಾರ್ಕಿನಲ್ಲೇ ಕೂತಿರ್‍ತೀನಿ. ನೀನು ಲೈಟ್ ಆರಿಸಿದ ತಕ್ಷಣ ನನ್ನಷ್ಟಕ್ಕೆ ನಾನೇ “ಜೋ… ಗುಡ್‌ನೈಟ್, ಸ್ವೀಟ್ ಡ್ರೀಮ್ಸ್’ ಎಂದು ಹೇಳಿ ಹೋಗಿಬಿಡ್ತೀನಿ. ಆಮೇಲೆ ಇಡೀ ರಾತ್ರೀನ ನಿನ್ನದೇ ಧ್ಯಾನದಲ್ಲಿ ಕಳೆದು ಬೆಳ್ಳಂಬೆಳಗ್ಗೇ ನಿನಗಿಂತ ಮುಂಚೆ ರೆಡಿಯಾಗಿ ಸೀದಾ ಎನ್‌ಎಂಕೆಆರ್‌ವಿ ಕಾಲೇಜಿನ ಹತ್ತಿರ ಒಂದೇ ಬಿಡ್ತೀನಿ…

ಏನ್ ಮಾಡ್ಲಿ ಹೇಳು ಜೋ… ಅದು ಹೇಳಿ ಕೇಳಿ ಲೇಡೀಸ್ ಕಾಲೇಜು. ಇಲ್ಲದಿದ್ರೆ ಬಿಡ್ತಿದ್ದೆ ಅಂದುಕೊಂಡೆಯಾ? ಹೇಗಾದ್ರೂ ಮಾಡಿ ಪರೀಕ್ಷೆ ನಡೀತಾ ಇರುವಾಗಲೇ ಒಳಗೆ ಬರುತ್ತಿದ್ದೆ. ಹಾಗೆ ಬಂದವನು ನಿನಗೆ ಬೆಸ್ಟ್ ಆಫ್ ಲಕ್ ಹೇಳಿ ಬಂದು ಬಿಡುತ್ತಿದ್ದೆ…
ನೀನೇ ನೋಡ್ತಾ ಇದೀಯಲ್ಲ ಜೋ, ನಂಗೆ ನಿನ್ನನ್ನ ಮುಟ್ಟುವ, ಲೈನ್ ಹೊಡೆಯುವ, ಗುಲಾಬಿ ಕೊಡುವ, ನಿನ್ನ ಹಿಂದೆಯೇ ನಿಂತುಕೊಂಡು ಹಾಡು ಹೇಳುವ… ಉಹುಂ, ಇಂಥ ಯಾವ ಹುಚ್ಚೂ ನನಗಿಲ್ಲ. ನನ್ನದು ಪ್ರಾಮಾಣಿಕ ಪ್ರೀತಿ, ಶುದ್ಧ ಪ್ರೀತಿ. ಅಮರ ಪ್ರೀತಿ. ಮಧುರ ಪ್ರೀತಿ. ನೀನೇ ಮುಂದಾಗಿ “ಐ ಲವ್ ಯೂ’ ಎಂದು ಹೇಳುವವರೆಗೂ ನಾನು ನಿನ್ನ ಕೈ ಮುಟ್ಟಲಾರೆ. ನಿನ್ನೆದುರು ನಿಂತು ಪೆದ್ದು ಪೆದ್ದಾಗಿ ನಗಲಾರೆ. ನಿನ್ನ ಒಪ್ಪಿಗೆ ತಡವಾಗಿಯೇ ಸಿಕ್ಕರೂ ಅಂಥ ತೊಂದರೆ, ನಷ್ಟ ಯಾವುದೂ ನನಗಿಲ್ಲ. ಈಗಿನ್ನೂ ನಂಗೆ ೨೮ ವರ್ಷ ಕಣೇ ಜೋ… ಹಾಗಾಗಿ ನಾನು ಕಾಯಬಲ್ಲೆ…

ಈ ಪಿಯುಸಿ ಪರೀಕ್ಷೆಗೆ ಅಂತ ನೀನು ತಯಾರಾಗ್ತಾ ಇದೀಯ ನೋಡು, ಅದನ್ನು ನೋಡಿದಾಗೆಲ್ಲ ಹೆದರಿಕೆಯಾಗುತ್ತೆ. ಈ ಹುಡುಗಿ ಇಷ್ಟೊಂದು ಓದ್ತಾಳಲ್ಲ, ಓದಿ ಓದಿ ಎಲ್ಲವೂ ಕನ್‌ಫ್ಯೂಸ್ ಆಗಿಬಿಟ್ರೆ ಅನ್ನಿಸಿ ದಿಗಿಲಾಗುತ್ತೆ. ರಾತ್ರಿ ಪೂರ್ತಿ ನಿದ್ದೆಗೆಟ್ಟಿರ್‍ತೀಯಲ್ಲ, ಆ ಕಾರಣಕ್ಕೆ ಪರೀಕ್ಷೆ ಬರೀತಿರೋವಾಗಲೇ ತಲೆ ಸುತ್ತು ಬಂದು ಬಿದ್ದು ಬಿಟ್ರೆ ಗತಿಯೇನು ಅನ್ನಿಸಿ ಗಾಬರಿಯಾಗುತ್ತೆ. ಆದ್ರೆ ನೀನು, ಬೆಳ್ಳಂಬೆಳಗ್ಗೆ ಕಲರ್‌ಕಲರ್‌ಕಲರ್ರಾಗಿ ಡ್ರೆಸ್ ಮಾಡ್ಕೊಂಡು, ಘಂಘಮಾ ಸೆಂಟು ಹಾಕ್ಕೊಂಡು ಕಾಲೇಜಿಗೆ ಬರ್‍ತೀಯಲ್ಲ, ಆಗ… ಅರರೆ, ರಾತ್ರಿ ನಿದ್ರೆ ಗಟ್ಟಿದ್ರೂ ಬೆಳಗಿನ ಹೊತ್ತಿಗೆ ಹೀಗೆ ಫ್ರೆಶ್ಶಾಗಿ ಬರಲು ಸಾಧ್ಯವಾ ಅನ್ನಿಸಿ ಎಷ್ಟೆಲ್ಲ ಖುಷಿಯಾಗ್ತದೆ ಅಂತೀಯಾ? ಇನ್ನೂ ಒಂದು ಮಾತು ಹೇಳಲಾ ಜೋ…? ಸ್ವಲ್ಪ ತೆಳ್ಳಗೆ, ಸ್ವಲ್ಪ ಬೆಳ್ಳಗಿದೀಯ ಸರಿ. ಸ್ವಲ್ಪ ಸೋನಾಲಿ ಬೇಂದ್ರೆ ಥರಾ ಕಾಣ್ತೀಯ ನಿಜ. ಆದ್ರೆ ನಿಂಗೆ ಮೂಗೇ ಇಲ್ವಲ್ಲ ಮಾರಾಯ್ತಿ? ಹಾಗಿದ್ರೂ ನಾನು ಪ್ರೀತಿಸ್ತಾ ಇದೀನಿ. ಜಗತ್ತಿನಲ್ಲಿ ನಿನ್ನಂಥ ಹುಡುಗಿ ಇನ್ಯಾರೂ ಇಲ್ಲ ಅಂತ ಹತ್ತು ಜನರ ಮುಂದೆ ವಾದಿಸ್ತಾ ಇದೀನಿ. ಯಾಕೆ ಅಂದ್ರೆ… ಹೌದು ಕಣೇ, ನಾನು ನಿನ್ನನ್ನ ಪ್ರೀತಿಸ್ತಾ ಇದೀನಲ್ಲ, ಆ ಕಾರಣಕ್ಕೆ!

ಜೋ… ಒಂದೇ ಒಂದ್ಸಲ ನೀನು “ಕರಿಯಾ ಐ ಲವ್ ಯೂ’ ಅಂತ ಹಾಡಿದ್ರೆ ಸಾಕು, ನಾನು ಆ ಕ್ಷಣವೇ ಬೆಳ್ಳಿ ಐ ಲವ್ ಯೂ ಎಂದು ಕೋರಸ್ ಹಾಡ್ತೀನಿ. ಮರು ಕ್ಷಣದಿಂದಲೇ ಒಳ್ಳೇ ಹುಡುಗ ಆಗಿಬಿಡ್ತೀನಿ. ದಿನಾಲೂ ನಿಂಗೆ ಬೈಕ್‌ನಲ್ಲಿ ಡ್ರಾಪ್ ಕೊಡ್ತೀನಿ. ಸಂಜೆ ಹೊತ್ತು ವಾಕಿಂಗ್ ಬರ್‍ತೀನಿ. ಕಾಫಿ ಡೇಲಿ ಐಸ್‌ಕ್ರೀಂ ಕೊಡಿಸ್ತೀನಿ. ನೀನು ರೇಗಿದಾಗೆಲ್ಲ ಸೈಲೆಂಟ್ ಆಗಿರ್‍ತೀನಿ. ನೀನು ಫ್ರೆಂಡ್ಲಿ ಆಗಿರ್‍ತೀಯಲ್ಲ, ಆಗ ಇದ್ದಕ್ಕಿದ್ದಂತೆ ನಿನ್ನ ಕಿರುಬೆರಳು ಚಿವುಟಿ ಮಳ್ಳಿ ಥರಾ ನಡ್ಕೊಂಡು ಬರ್‍ತೀನಿ… ಇವತ್ತಿಗೆ ಇಷ್ಟು ಸಾಕು. ನಾಳೆ ಚೆನ್ನಾಗಿ ಪರೀಕ್ಷೆ ಬರಿ.

-ಯಮಾಹಾ ಆರ್‌ಎಕ್ಸ್ ಹುಡುಗ