ಭಾರತ ಮಾತೆಯ ವೀರಪುತ್ರ ನಾನು..

null

ಪ್ರಿಯ ಬಂಧು,
ಹೇಗಿದ್ದೀರಿ? ಕುಶಲವಷ್ಟೆ? ಇವತ್ತು ಬೆಳಗ್ಗೆ ತಿಂಡಿಯ ಬಿಡುವಿನ ಮಧ್ಯೆ ತೀರಾ ಆಕಸ್ಮಿಕವಾಗಿ ಟಿ.ವಿ. ನೋಡಿದೆ. ‘ಕರ್ನಾಟಕದ ಹಲವು ಕಡೆಗಳಲ್ಲಿ ಭಾರೀ ಮಳೆ’ ಎಂಬ ಸುದ್ದಿ ಕಾಣಿಸಿತು. ಮರುಕ್ಷಣವೇ, ಅದೇ ಕರ್ನಾಟಕದ ಒಂದು ಮೂಲೆಯಲ್ಲಿರುವ ನನ್ನ ಊರು, ಅಲ್ಲಿನ ಜನ, ಅವರ ಸಂಕಟ, ಆ ಮಧ್ಯೆಯೇ ಸಾಗುವ ಅವರ ಬದುಕು ನೆನಪಾಯಿತು. ಹಿಂದೆಯೇ-ಬೈಛಾನ್ಸ್ ನಾನು ಈಗ ಊರಲ್ಲಿದ್ದಿದ್ರೆ- ಬೇಸಿಗೆಗೂ ಮೊದಲೇ ಶುರುವಾದ ದಿಢೀರ್ ಮಳೆಯ ಬಗ್ಗೆ ಹೇಗೆಲ್ಲ ಮಾತಾಡ್ತಾ ಇದ್ದೆನೋ ಅನ್ನಿಸಿತು.
ಹೌದಲ್ವ ಗೆಳೆಯಾ? ಈಗ ನಿನ್ನ ಕಣ್ಮುಂದೆ ಯುಗಾದಿಯ ಸಂಭ್ರಮವಿದೆ. ಹಬ್ಬಕ್ಕೆ ಇನ್ನೂ ಹದಿನೈದು ದಿನ ಬಾಕಿ ಇರುವಾಗಲೇ -ಮನೆ ಮಂದಿಗೆಲ್ಲ ಹೊಸ ಬಟ್ಟೆ ತಗೋಬೇಕು. ಎರಡು ದಿನ ಮೊದಲೇ ಊರಿಗೆ ಹೋಗಬೇಕು. ಗೆಳೆಯರು, ಬಂಧುಗಳ ಜತೆ ಆರಾಮಾಗಿ ಕಾಲ ಕಳೀಬೇಕು. ಈ ಸಲ ಬೆಳೆ ಚೆನ್ನಾಗಿ ಬಂದಿದೆಯಾ ಗಮನಿಸಬೇಕು. ಊರಿಂದ ಬರುವಾಗ ಅವ್ವನ ಕೈಗೆ ಐನೂರರ ನೋಟು ಕೊಟ್ಟು-ಇಟ್ಕೋ, ಇದು ನಿಂಗೆ ಅನ್ನಬೇಕು. ಆಕೆಗೆ ಮಮತೆಗೆ ನಗುವಾಗಬೇಕು. ತಗೊಂಡಿರೋ ಹೊಸಾ ಮೊಬೈಲ್ನಲ್ಲಿ ಅಮ್ಮ, ಅಜ್ಜಿ, ತಂಗಿಯ ಮಗಳು… ಹೀಗೆ ಎಲ್ಲರ ಫೋಟೊ ತೆಗೀಬೇಕು. ಫುಸಫುಸನೆ ಬೀಡಿ ಎಳೀತಿರ್ತಾನಲ್ಲ ಅಪ್ಪ, ಅವನ್ದೂ ಒಂದು ಫೋಟೊ ತೆಗೀಬೇಕು… ಹಳೇ ಬಟ್ಟೇಲಿರುವಾಗ್ಲೇ ಫೋಟೊ ಹೊಡ್ದಲ್ಲೇ ಮಗಾ ಎಂಬ ಅವನ ಮಾತಿಗೆ ಖುಷಿಯಿಂದ ನಗಬೇಕು… ಇಂಥವೇ ಯೋಚನೆಯಲ್ಲಿ ನೀನಿರುವಾಗಲೇ- ಯಾಕೋಪ್ಪ, ನನ್ನ ಕಥೇನ ಹೇಳ್ಕೋಬೇಕು ಅನ್ನಿಸ್ತಿದೆ. ಆದಷ್ಟೂ ನಿಂಗೆ ಬೋರು ಹೊಡೆಸದ ಹಾಗೆ ಹೇಳ್ತಾ ಹೋಗ್ತೇನೆ- ಕೇಳಿಸ್ಕೋ ಗೆಳೆಯಾ, ಪ್ಲೀಸ್…
***
ಹೌದು. ನಾನು ಯೋಧ. ಜಮ್ಮು-ಕಾಶ್ಮೀರದ ಬಾರ್ಡರ್ನಲ್ಲಿದೀನಿ. ದಿನದ ಹನ್ನೆರಡು ಗಂಟೆಯೂ ನನ್ನೆದುರು ಹಿಮಾಲಯ ಇರುತ್ತೆ. ಅದರ ಮುಂದೆ ನಾನು! ಒಂದು ವೇಳೆ ಪಿಯೂಸಿಯ ನಂತರ ಇನ್ನೊಂದಿಷ್ಟು ಓದಿದ್ರೆ ನಂಗೂ ಬೆಂಗಳೂರಲ್ಲೇ ಕೆಲಸ ಸಿಗ್ತಿತ್ತೋ ಏನೋ. ಆದರೆ ದೇಶಪ್ರೇಮದ ಬಿರುಸು ಜತೆಗಿತ್ತಲ್ಲ! ಆ ಕಾರಣದಿಂದ ಸೈನ್ಯ ಸೇರಿಕೊಂಡೆ. ಗಡಿ ಕಾಯುವ ಕೆಲಸಕ್ಕೆ ಬಂದೆ. ಈಗ, ಪ್ರತಿ ಮುಂಜಾನೆ ಎದ್ದಾಗಲೂ ನನ್ನ ಎದೆ ಸಂತೋಷದಿಂದ ಉಬ್ಬಿರುತ್ತೆ. ಇಷ್ಟೂ ದಿನ ದೇಶದ ಸೇವೆ ಮಾಡಿದೆನಲ್ಲ, ಸಾರ್ಥಕವಾಯ್ತು ಬದುಕು ಎಂಬ ಹೆಮ್ಮೆಯೇ ಅದಕ್ಕೆ ಕಾರಣ.
ಆದರೆ ಗೆಳೆಯಾ, ನಾನು ವಿರಾಗಿಯ ಪೋಸ್ ಕೊಡಲಾರೆ. ಎದೆಯೊಳಗಿರುವುದನ್ನು ಖುಲ್ಲಂಖುಲ್ಲ ಹೇಳಿಬಿಡ್ತೀನಿ. ಸದಾ ದೇಶ ಸೇವೆಯಲ್ಲಿ ಮಗ್ನರಾಗಿರುವ ಸೈನಿಕರ ಬದುಕು ಹೇಗಿದೆ ಎಂದು ಸಂಕ್ಷಿಪ್ತವಾಗಿ ಹೇಳ್ತಾ ಇದೀನಿ. ಹೌದು. ನಮ್ಮದು ಅತಂತ್ರ ಬದುಕು. ನೆಲೆ ತಪ್ಪಿದ ಬದುಕು. ಸಾವಿನೊಂದಿಗೆ ಸದಾ ಸರಸವಾಡುವ ಬದುಕು. ಈಗ ಏನೇ ಟೆಕ್ನಾಲಜಿ ಬಂದಿದೆ ಅಂದುಕೊಂಡರೂ ಆತ್ಮೀಯರಿಂದ ನಾವು ದೂರ ದೂರ. ಗಡಿ ಕಾಯುವವನು ಮೊಬೈಲು ಬಳಸುವಂತಿಲ್ಲ. ದೂರದ ದಿಲ್ಲಿಗೂ ಒಂದೇ ದಿನದಲ್ಲಿ ಹೋಗುವ ಕೊರಿಯರ್ ಸೌಭಾಗ್ಯ ಕಾಶ್ಮೀರದ ಗಡಿಯಲ್ಲಿನ ಯೋಧನಿಗಿಲ್ಲ. ಅವನಿಗೆ ಈಗಲೂ ಅಂಚೆಯಣ್ಣನೇ ಗೆಳೆಯ. ಅವನೇ ಹತ್ತಿರದ ಬಂಧು. ಅವನೇ ಸಂದೇಶವಾಹಕ.
ಹೌದಲ್ಲವಾ? ನಾವು ಆತ್ಮೀಯರಿಂದ ದೂರ ಅಂದೆ. ಗೊತ್ತಿರಬೇಕಲ್ಲ ನಿನಗೂ? ಸೇನೆಯಲ್ಲಿರುವವರು ತಮ್ಮೂರಿಗೆ ದಿನಾ ದಿನ ಫೋನ್ ಮಾಡುವಂತಿಲ್ಲ. ವಾರಕ್ಕೋ, ಹದಿನೈದು ದಿನಕ್ಕೋ, ತಿಂಗಳಿಗೋ ಒಮ್ಮೆ ಫೋನ್ ಮಾಡಿದರೂ ಗಂಟೆಗಟ್ಟಲೆ ಹರಟುವಂತಿಲ್ಲ. ಬೈಛಾನ್ಸ್, ತಂದೆಯೋ, ತಂಗಿಯೋ, ಅಮ್ಮನೋ, ಭಾವನೋ ದಿಢೀರ್ ತೀರಿಕೊಂಡರೆ ಅವರನ್ನು ನೋಡಿಹೋಗಲೂ ಬರುವಂತಿಲ್ಲ. ಹೋಗಲಿ, ಸುದ್ದಿ ತಿಳಿದ ಮೇಲಾದರೂ ನೆಮ್ಮದಿಯಿಂದ ಒಂದೆಡೆ ಕುಳಿತು ಅತ್ತು ಹಗುರಾಗೋಣ ಅಂದರೆ- ಉಹುಂ, ಅದು ಮೈಮರೆಯುವ ಕ್ಷಣವೇ ಅಲ್ಲ. ಸೆಂಟಿಮೆಂಟ್ಗೆ ಅಲ್ಲಿ ಜಾಗವಿಲ್ಲ. ಉಕ್ಕಿ ಬಂದ ಕಣ್ಣೀರು ಧುಮ್ಮಿಕ್ಕುವ ಮೊದಲೇ ಆ ಥರಥರ ಛಳಿಯ ಮಧ್ಯೆಯೇ ಇಂಗಿ ಹೋಗಬೇಕು! ವೀರಯೋಧ ಅನ್ನಿಸಿಕೊಂಡ ನಾನು ಅಳುತ್ತ ಕೂತರೆ… ಛೆ, ಅದು ಭಾರತಾಂಬೆಗೆ ಮಾಡುವ ಅವಮಾನವಲ್ಲವಾ ಗೆಳೆಯಾ?
ಇಷ್ಟಾಯಿತಲ್ಲ, ನಮ್ಮ ದಿನನಿತ್ಯದ ರೂಟೀನು ನೆನಪಿಸಿಕೊಂಡರೂ ಒಮ್ಮೊಮ್ಮೆ ದಿಗಿಲಾಗುತ್ತದೆ. ಸಂಕೋಚವೂ ಆಗುತ್ತದೆ. ಬೆಳಗ್ಗೆ ಎದ್ದವರೇ ಶೇವಿಂಗ್ ಮಾಡಲೇಬೇಕು. ಅದು ನಿಯಮ. ಶಿಸ್ತು. ಆಮೇಲೆ ಛಕ್ಕನೆ ಬಂದು ಸ್ನಾನ. ನಂತರ ಡ್ಯೂಟಿಗೆ ಎಂದು ಹೊರಟರೆ ಹೆಗಲಿಗೆ ರೈಫಲ್ಲು, ಮನದ ತುಂಬಾ ದೇಶದ ಚಿಂತೆ. ಹನ್ನೆರಡು ಗಂಟೆಯ ಕಾಫಿ, ಮಧ್ಯಾಹ್ನದ ಊಟ, ನಂತರದ ಐದೇ ನಿಮಿಷದ ತೂಕಡಿಕೆ, ಸಂಜೆಯ ಬಿಸ್ಸಿಬಿಸೀ ಟೀ, ರಾತ್ರಿ ಎಂಟೂವರೆಗೆ ಎನ್ಡಿಟೀವಿ ನ್ಯೂಸು, ಒಂಭತ್ತೂವರೆಗೆ ಭೂರೀ ಭೋಜನ, ಮಕ್ಕಳೊಂದಿಗೆ ಮಾತು, ಹತ್ತೂವರೆಗೆ ನಿದ್ದೆ… ಇಲ್ಲಣ್ಣಾ, ಅಂಥದೊಂದು ಬದುಕು ನಮಗಿಲ್ಲ. ಹವಾಮಾನದ ವೈಪರೀತ್ಯದ ಮಧ್ಯೆ ಬದುಕ್ತೀವಲ್ಲ, ಸಂಜೆಗೆ ವಾಪಸ್ ಬರ್ತೀವಿ ಅನ್ನೋ ನಂಬಿಕೆಯೇ ನಮಗಿರುವುದಿಲ್ಲ. ಶತ್ರು ಕಂಡರೆ ಸಾಕು, ನಮ್ಮ ರೈಫಲ್ಲು ಮೊಗಳುತ್ತದೆ. ಆ ಕಡೆಯಿಂದ ಬಂದವನೇನು ಕಡ್ಲೆಕಾಯಿ ತಿಂತಾ ಇರ್ತಾನಾ? ಅವನೂ ಗುಂಡು ಹೊಡೀತಾನೆ. ಇದ್ದರೆ ಗೆಲುವು, ಸೋತರೆ ಸಾವು ಎಂದುಕೊಂಡೇ ‘ಭಾರತ್ ಮಾತಾಕಿ ಜೈ’ ಎಂಬ ಘೋಷಣೆಯೊಂದಿಗೆ ಹೋರಾಟಕ್ಕಿಳೀತೀವಿ ನಾವು. ಗೆಳೆಯಾ, ಓದ್ತಾ ಇದೀಯ ತಾನೆ?
ಇದು ಯುದ್ಧ ಕಾಲದ ಮಾತಾಯಿತು. ಅಂಥದೇನೂ ಇಲ್ಲ. ಎಲ್ಲಾ ಕೂಲ್ಕೂಲ್ ಅಂದುಕೊಂಡರೆ, ಅದೇ ವೇಳೆಗೆ ಇನ್ನೆಲ್ಲೋ ಭೂಕಂಪವಾದ, ಪ್ರವಾಹ ಬಂದ ಸುದ್ದಿ ಬರುತ್ತೆ. ತಕ್ಷಣವೇ ಅಲ್ಲಿಗೆ ಓಡಬೇಕು. ನೊಂದವರಿಗೆ ಹೆಗಲಾಗಬೇಕು. ಜೀವನದ ಹಂಗು ತೊರೆದು ಕೆಲಸ ಮಾಡಬೇಕು. ಎಷ್ಟೋ ಸಂದರ್ಭದಲ್ಲಿ ನಮ್ಮ ಅಕ್ಕ-ತಂಗಿಯರನ್ನೇ ಹೋಲುವ; ಅಣ್ಣನ ಮಕ್ಕಳ ಥರಾನೇ ಇರುವ, ಅವ್ವನಷ್ಟೇ ಸುಕ್ಕು ಸುಕ್ಕು ಮೈಯ; ಗೆಳತಿಯಷ್ಟೇ ಸುಂದರ ಮುಖದ ಶವಗಳು ಸಿಕ್ಕಿಬಿಡುತ್ತವೆ. ಆಗಲೂ ಅಷ್ಟೆ, ಒಂದರೆಗಳಿಗೆ ಊರು, ಅಲ್ಲಿನ ಬಂಧು-ಬಳಗ ನೆನಪಾಗುತ್ತಾರೆ. ಊರಲ್ಲಿ ಯಾರಿಗಾದ್ರೂ ಏನಾದ್ರೂ ಆಗಿದ್ರೆ ಅನ್ನಿಸಿದಾಗ ಜೀವ ಝಲ್ ಅಂದುಬಿಡುತ್ತೆ. ಆದರೇನು? ಆಗಲೂ ಸೈನಿಕ ಅಳುವಂತಿಲ್ಲ. ಬದುಕಿಸಲು ಬಂದವನೇ ಬಿಕ್ಕಳಿಸಲು ನಿಂತರೆ, ಬದುಕು ಕಳಕೊಂಡವರ ಗತಿ ಏನು?
ಇನ್ನೂ ಒಂದು ಮಾತಿದೆ. ನಾನೇನೋ ದೇಶ ಸೇವೆಯ ಕಾರಣದಿಂದ ಯುದ್ಧ ಮಾಡ್ತೀನಿ. ಅಕಸ್ಮಾತ್ ಯುದ್ಧ ಕೈದಿಯಾಗಿ ಸೆರೆಸಿಕ್ಕಿದೆ ಅಂದರೆ- ಭಗವಂತಾ, ಆಗಿನ ಪಾಡು ನಾಯಿಗಳಿಗೂ ಬೇಡ. ಹದಿನೆಂಟೋ, ಇಪ್ಪತ್ತೋ ವರ್ಷಗಳ ನಂತರ ಬದುಕಿ ಬಂದರೆ ಅದು ಪವಾಡ! ಅಥವಾ ಯುದ್ಧದಲ್ಲಿ ಶತ್ರುಗಳ ಗುಂಡಿಗೆ ಸಿಕ್ಕಿ ಕೈ-ಕಾಲು ಕಳೆದುಕೊಂಡರೆ ನಂತರದ ಸ್ಥಿತಿ ಘೋರಘೋರ. ಒಂದು ಕಡೇಲಿ ಸರಕಾರಗಳು ಸರಿಯಾಗಿ ನೋಡಿಕೊಳ್ಳಲ್ಲ. ಈ ಕಡೆ ಸಮಾಜದಲ್ಲೂ ಮರ್ಯಾದೆ ಸಿಗಲ್ಲ! ಒಂದು ವೇಳೆ ಯುದ್ಧಕ್ಕೆ ಹೋದವನು ಸತ್ತೇ ಹೋದರೆ-ಮುಗಿದೇ ಹೋಯಿತು. ಅವನ ಹೆಂಡತಿ- ಮಕ್ಕಳು, ಅಪ್ಪ-ಅಮ್ಮ, ಬಂಧುಗಳನ್ನು ಯಾರೂ ಕ್ಯಾರೇ ಅನ್ನುವುದೂ ಇಲ್ಲ! ಅವರ ಬದುಕು ಛಿದ್ರ ಛಿದ್ರ…
ಹೌದು ಗೆಳೆಯಾ, ಇದನ್ನೆಲ್ಲಾ ನೆನಪು ಮಾಡಿಕೊಂಡಾಗ ಛೆ, ದೇಶ ಸೇವೆಗೆ ಪ್ರತಿಫಲ ಇಷ್ಟೇನಾ ಅನ್ನಿಸುವುದಂಟು. ಶತ್ರುಗಳು, ಗೆಳೆಯರು, ಅಪರಿಚಿತರು, ಸಾಯುವುದನ್ನು ದಿನಾದಿನ ನೋಡ್ತಾನೇ ಇರ್ತೀವಲ್ಲ ಅದೇ ಕಾರಣದಿಂದ ಒಂದು ಬಗೆಯ ವೈರಾಗ್ಯ ಕೂಡ ನಮ್ಮ ಜತೆಯಾಗಿರುತ್ತೆ. ವರ್ಷದ ರಜೆಯಲ್ಲಿ ಹೆಣ್ಣು ನೋಡಲು ಹೋದರೆ ‘ಮಿಲಿಟ್ರೀಲಿ ಇರೋ ಹುಡುಗನಿಗೆ ಹೆಣ್ಣು ಕೊಡಲ್ಲ ಕಣ್ರೀ’ ಅಂತಾರಲ್ಲ ಜನ, ಆಗೆಲ್ಲ ಎಷ್ಟು ನೋವಾಗುತ್ತೆ ಗೊತ್ತಾ ಗೆಳೆಯಾ?
ಕ್ಷಮಿಸು. ಏನೇನೋ ಹೇಳಿಬಿಟ್ಟೆ. ಹಬ್ಬದ ಸಡಗರ ಹೀಗೆಲ್ಲ ಇರಬೇಕು ಎಂದು ಯೋಚಿಸ್ತಿದ್ದ ನಿನಗೆ ಭಂಗವಾಗಿರಬೇಕು.
ಮೊನ್ನೆ ಆಕಸ್ಮಿಕವಾಗಿ ಟೀವಿಯಲ್ಲಿ ಕರ್ನಾಟಕದ ಸುದ್ದಿ ಕೇಳಿದ್ದೇ ತಡ, ಊರು ನೆನಪಾಯಿತು. ಅವ್ವ ನೆನಪಾದಳು. ಅಪ್ಪ ಕಣ್ಮುಂದೆ ಬಂದ. ಯುಗಾದಿಯ ಸಂಭ್ರಮದ ಗೆಜ್ಜೆ ಸುಮ್ನೇ ಸದ್ದು ಮಾಡಿತು. ಹೇಗಿದ್ದರೂ ನೀನು ಊರಿಗೆ ಹೋಗ್ತೀಯಲ್ಲ, ಆಗ ಒಂದ್ಸಲ ನಮ್ಮ ಮನೆಗೂ ಹೋಗಿ ಬಾ ಎಂದು ಹೇಳಲು ಈ ಪತ್ರ ಬರೆದುಬಿಟ್ಟೆ. ಗೆಳೆಯಾ, ನನ್ನ ಉಸಿರಿರುವವರೆಗೂ ಭಾರತಾಂಬೆಯ ಕೂದಲೂ ಕೊಂಕದು. ಆದರೆ ಊರಲ್ಲಿದ್ದಾಳಲ್ಲ ಅಮ್ಮ, ನನಗೆ ಅವಳದ್ದೇ ಚಿಂತೆ. ಅವಳದ್ದೇ ಧ್ಯಾನ. ಅವಳ ಕಷ್ಟ-ಸುಖವನ್ನು ನೀನೊಮ್ಮೆ ವಿಚಾರಿಸಿ ಪತ್ರ ಬರಿ. ಆಕೆಯನ್ನು ನೀನೂ ಅವ್ವಾ ಎಂದೇ ಕರೀತೀಯಲ್ಲ? ನಮ್ಮ ಸಂಬಂಧ ವಿವರಿಸಲು ಇನ್ಯಾವ ಪದ ಬೇಕು? ಕಾಯ್ತಾ ಇರ್ತೀನಿ. ಪತ್ರ ಬರಿ. ಉಳಿದಂತೆ ಉಭಯ ಕುಶಲೋಪರಿ ಸಾಂಪ್ರತ. ನಮಸ್ಕಾರ…
***
ಪ್ರಿಯ ಓದುಗಾ, ಇದು ಕಾಶ್ಮೀರದ ಗಡಿಯಲ್ಲಿರುವ ಯೋಧನೊಬ್ಬನ ಪತ್ರ. ನಿರೂಪಣೆಯ ಧಾಟಿ ಬದಲಾಗಿದೆ, ಅಷ್ಟೆ. ಹೌದಲ್ಲವಾ? ಈತ ನಿಮ್ಮೂರಿನ ಒಬ್ಬ ಯೋಧನೂ ಆಗಿರಬಹುದು. ಯುಗಾದಿಗೆಂದು ಊರಿಗೆ ಹೋದಾಗ ಪ್ಲೀಸ್, ಒಮ್ಮೆ ಅವನ ಮನೆಗೆ ಹೋಗಿ ಬನ್ನಿ. ಹಾಗೆ ಮಾಡಿದರೆ, ಯೋಧನ ತಾಯಿ ಖುಷಿಯಾಗುತ್ತಾಳೆ. ಆಕೆಯ ನಗು ಯೋಧನ ಕೆಚ್ಚು ಹೆಚ್ಚಿಸುತ್ತದೆ. ಭಾರತಾಂಬೆಯ ಜತೆಗೆ ನಮ್ಮನ್ನೂ ಕಾಪಾಡುತ್ತದೆ. ನಿಜವಾದ ಯುಗಾದಿ ಎಂದರೆ ಅದು. ಅಲ್ಲವೇ?

ಬಿಂದಾಸ್ ಬಾಯ್ ಪುನೀತ್ ಗೆ

null

ಬಿಂದಾಸ್ ಬಾಯ್ ಪುನೀತ್ಗೆ,

ಆಕಾಶದಷ್ಟು ಪ್ರೀತಿ, ಅನುರಾಗ ಮತ್ತು ಶುಭಾಶಯ.
ಹೌದಲ್ವ ಅಪ್ಪೂ, ಇವತ್ತು ನಿನ್ನ ಬರ್ತ್ಡೇ. ಅದೇ ನೆಪದಲ್ಲಿ ನೀನು ಸಖತ್ ಬ್ಯುಸಿಯಾಗಿದೀಯ. ಗೆಳೆಯರು, ಬಂಧುಗಳು, ಚಿತ್ರರಂಗದ ಗಣ್ಯರಿಂದ ಒಂದೇ ಸಮನೆ ಬರ್ತಾ ಇರೋ ಫೋನ್ ಕರೆಗೆ ಕಿವಿಯಾಗ್ತಾ ಇದೀಯ. ತುಂಬ ಸೌಜನ್ಯದಿಂದ ‘ಥ್ಯಾಂಕ್ಯೂ, ಥ್ಯಾಂಕ್ಯೂ ನಿಮ್ಮ ಪ್ರೀತಿಗೆ ಋಣಿ’ ಎಂದು ಉತ್ತರ ಹೇಳ್ತಾ ಇದೀಯ. ಈ ಸಡಗರದ ಮಧ್ಯೆಯೇ ಒಂದ್ಸಲ ಅಪ್ಪ, ಇನ್ನೊಂದ್ಸಲ ಚಿಕ್ಕಪ್ಪ ನೆನಪಾಗ್ತಾರಲ್ಲ- ಆಗ ನಿಂತ ನಿಂತಲ್ಲೇ ಕಣ್ತುಂಬಿಕೊಳ್ತಾ ಇದೀಯ. ಆಳೆತ್ತರದ ಗುಲಾಬಿ ಹಾರ, ಕೈತುಂಬಾ ಸ್ವೀಟು ಹಿಡ್ಕೊಂಡಿರೋ ಅಭಿಮಾನಿಗಳು ದೊಡ್ಡ ಖುಷಿಯಿಂದ ‘ನಿನ್ನಿಂದಲೇ ನಿನ್ನಿಂದಲೇ ಕನಸೆಲ್ಲ ನನಸಾಗಿದೆ, ನಿನ್ನಿಂದಲೇ ನಿನ್ನಿಂದಲೇ ನಮ್ ಖುಷಿಯು ಹೆಚ್ಚಾಗಿದೇ’ ಎಂದು ಹಾಡುತ್ತಿದ್ದಾರೆ. ಅವರ ಪ್ರೀತಿಗೆ ಹೇಗೆ ಪ್ರತಿಕ್ರಿಯಿಸಬೇಕೋ ಗೊತ್ತಾಗದೆ ಒಂಥರಾ ಸಂಕೋಚದಿಂದ ನಿಂತಿದೀಯಲ್ಲ ಚಿನ್ನ; ಅದನ್ನು ಕಂಡಾಗಲೇ ನಿನಗೊಂದು ಪತ್ರ ಬರೀಬೇಕು. ಹಳೆಯ ನೆನಪುಗಳ ತೋಟದಲ್ಲಿ ಬೀ ಹ್ಯಾಪಿ ನೋ ಬೀಪಿ ಅಂದುಕೊಂಡೇ ಒಮ್ಮೆ ಸುತ್ತಾಡಬೇಕು ಅನ್ನಿಸಿಬಿಡ್ತು…

****

ನಮಗೆ ಚೆನ್ನಾಗಿ ನೆನಪಿದೆ. ಮೂವತ್ತೂ ಚಿಲ್ಲರೆ ವರ್ಷಗಳ ಹಿಂದಿನ ಮಾತು. ಆಗಷ್ಟೇ ಅಣ್ಣಾವ್ರ ‘ವಸಂತಗೀತ’ ಬಿಡುಗಡೆಯಾಗಿತ್ತು. ಸಿನಿಮಾ ನೋಡಿ ಹೊರಬಂದವರೆಲ್ಲ ಹೇಳಿದ್ದುದು ಒಂದೇ ಮಾತು: ‘ರಾಜ್ಕುಮಾರ್ ಮಗಾನೂ ಪಾತ್ರ ಮಾಡಿದ್ದಾನೆ. ಸಖತ್ ಚೂಟಿ ಇದಾನೆ. ಅವ್ನು ಕೃಷ್ಣ ಸುಂದರ. ಬೊಂಬಾಟಾಗಿ ಡ್ಯಾನ್ಸು ಮಾಡಿದಾನೆ. ನೋಡೋಕೆ ಚಿಲ್ಟು ಥರಾ ಇದಾನೆ ನಿಜ. ಆದ್ರೆ ಫೈಟಿಂಗ್ ಸೀನ್ನಲ್ಲಿ ಕರಾಟೆ ತೆಗೀತಾನೆ ಕಣ್ರೀ. ಅಷ್ಟೇ ಅಲ್ಲ, ‘ಹಾಯಾದಾ ಈ ಸಂಜೆ ಆನಂದ ತುಂಬಿರಲು…’ ಅನ್ನೋ, ಹಾಡಲ್ಲಿ- ‘ಏನು ಸಂತೋಷವೋ, ಏನು ಉಲ್ಲಾಸವೋ’ ಎಂದು ಮುದ್ದಾಗಿ ಹಾಡಿದಾನೆ ಕೂಡಾ. ಅವನ ಅಭಿನಯ ಕಂಡರೆ ಬಾಚಿ ತಬ್ಕೊಂಡು ಮುದ್ದಾಡಬೇಕು ಅನಿಸುತ್ತೆ…’
ಮುಂದೆ ‘ಚಲಿಸುವ ಮೋಡಗಳು’ ಬಂತಲ್ಲ ಡಿಯರ್? ಆಗಂತೂ ‘ಕಾಣದಂತೆ ಮಾಯವಾದನೋ, ನಮ್ಮ ಶಿವ ಕೈಲಾಸ ಸೇರಿಕೊಂಡನೊ’ ಎಂಬ ನಿನ್ನ ಹಾಡು ಎಲ್ಲರಿಗೂ ಬಾಯಿಪಾಠ ಆಗಿಬಿಡ್ತು. ಆ ಹಾಡಿಗೆ ಮರುಳಾದ ಅದೆಷ್ಟೋ ಮಂದಿ ತಮ್ಮ ಮಕ್ಕಳಿಗೆ ‘ಲೋಹಿತ್’ ಅಂತಾನೇ ಹೆಸರಿಟ್ರು. ಅಣ್ಣಾವ್ರು ಮಗನ ಹೆಸರಿಟ್ಟು ಖುಷಿಪಟ್ರು. ಆನಂತರ ‘ಭಾಗ್ಯವಂತ’ ಸಿನಿಮಾದಲ್ಲಿ ‘ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ, ಚಂದ್ರ ಮೇಲೆ ಬಂದ’ ಅಂತ ನೀನು ಮುದ್ ಮುದ್ದಾಗಿ ಹಾಡಿದೆಯಲ್ಲ, ಅದು ಕಂದಮ್ಮಗಳ ಪಾಲಿಗೆ ಜೋಗುಳದ ಹಾಡೇ ಆಗಿಬಿಡ್ತು. ಆ ಸಿನಿಮಾದಲ್ಲಿ ನಿನ್ನ ಪಾತ್ರ, ನಿನ್ನ ಮುಗ್ಧತೆ ಮತ್ತು ದಿಲ್ ಪಸಂದ್ ಅಭಿನಯ ಕಂಡು ಗಾಂದಿನಗರದ ಮಂದಿ ತುಂಬಾ ಸ್ಪಷ್ಟವಾಗಿ ಹೇಳಿಬಿಟ್ರು- ಸ್ಟಾರ್ ಈಸ್ ಬಾರ್ನ್.

ಆಮೇಲಾಮೇಲೆ ‘ಬೆಟ್ಟದ ಹೂವು’ ಬಂತು. ಅದಕ್ಕೆ ರಾಷ್ಟ್ರಪ್ರಶಸ್ತಿಯ ಕಿರೀಟ ಬೇರೆ. ನಾವೆಲ್ಲ ಅದನ್ಣೇ ಮೆಲುಕು ಹಾಕ್ತಾ ಇದ್ದಾಗಲೇ ‘ಎರಡು ನಕ್ಷತ್ರಗಳು’ ಬಂದು ಹೋಯ್ತು. ನಿನಗೋಸ್ಕರ ಅಂತಾನೇ ‘ಯಾರಿವನು’ ತಯಾರಾಯ್ತು. ಅದಾದ ಎಷ್ಟೋ ವರ್ಷದ ಮೇಲೆ ಅಪ್ಪಾಜಿ ಜತೇಲಿ ನಟಿಸಿದ ‘ಪರಶುರಾಮ್’ ಬಂತು. ಆ ವೇಳೆಗೆ ನೀನಷ್ಟೇ ಅಲ್ಲ, ಹೆಸರೂ ಬದಲಾಗಿತ್ತು. ಲೋಹಿತ್ – ಪುನೀತ್ ಆಗಿದ್ದ! ಹುಡುಗಾಟಿಕೆ ಮಾಯವಾಗಿ ಜವಾಬ್ದಾರಿ ಹೆಗಲೇರಿತ್ತು. ಇದ್ದಕ್ಕಿದ್ದಂತೆಯೇ ನೀನು ಟ್ರ್ಯಾಕ್ ಬದಲಿಸಿದೆ. ಸಿನಿಮಾಕ್ಕೆ ಸಲಾಂ ಅಂದು ಬಿಜಿನೆಸ್ಗೆ ಇಳಿದುಬಿಟ್ಟೆ. ಅದೇ ಸಂದರ್ಭದಲ್ಲಿ ಒಂದಿಷ್ಟು ಫಜೀತಿಯಾಯ್ತು ನೋಡು- ಇದೇ ಜನ, ಪುನೀತು ಸಖತ್ ಒರಟ ಅಂತೆ ಕಣ್ರೀ ಎಂದು ಸುದ್ದಿ ಹಬ್ಬಿಸಿದರು!
ಥತ್, ಅದೊಂದು ಕೆಟ್ಟ ಘಳಿಗೆ ಮತ್ತು ಕಹಿ ನೆನಪು. ಬಿಟ್ಹಾಕು ದೊರೇ. ಆಮೇಲೇನಾಯ್ತು ಹೇಳು, ಒನ್ ಫೈನ್ ಡೇ ‘ಅಪ್ಪು’ ಸಿನಿಮಾದ ಮೂಲಕ ನೀನು ಬಂದೇಬಿಟ್ಟೆ. ಜನ ಖುಷಿಪಟ್ರು. ನಿನ್ನ ಫೈಟು, ಹಾಡು, ಡ್ಯಾನ್ಸು, ಸರಳತೆ, ವಿನಯ, ಹಾವ-ಭಾವ ಎಲ್ಲವನ್ನೂ ಇಷ್ಟಪಟ್ರು. ಮುಂದೆ ‘ಅಭಿ’, ‘ನಮ್ಮ ಬಸವ’, ‘ವೀರ ಕನ್ನಡಿಗ’… ಹೀಗೆ ಒಂದೊಂದೇ ಸಿನಿಮಾ ಕೊಡ್ತಾ ಹೋದೆ ನೀನು. ಆಮೇಲೆ ಅಬ್ಬಬ್ಬಬ್ಬಬ್ಬಾ ಅನ್ನುವಂಥ ‘ಆಕಾಶ್’ ಬಂತು ನೋಡು- ಜನ ಹುಚ್ಚೆದ್ದು ಕುಣಿದ್ರು. ತುಂಬಾ ಆಸೆಪಟ್ಟು ಮತ್ತೆ ಮತ್ತೆ ನೋಡಿದ್ರು. ಪಡ್ಡೆ ಹುಡುಗರಂತೂ ನಿನ್ನ ಹೆಸರನ್ನೇ ಕೈಮೇಲೆ ಹಚ್ಚೆ ಹಾಕಿಸಿಕೊಂಡರು. ತೆರೆಯ ಮೇಲೆ ರಮ್ಯಾ ಅನ್ನೋ ಸುಂದರಾಂಗಿಯ ಕಡೆ ನೋಡುತ್ತಾ- ‘ನೀನೇ ನೀನೇ ನನಗೆಲ್ಲಾ ನೀನೇ’ ಎಂದು ಹಾಡುತ್ತಿದ್ದರೆ- ಈ ಅಭಿಮಾನಿಗಳು ನಿನ್ನನ್ನೇ ಎದೆಯೊಳಗಿಟ್ಟುಕೊಂಡು- ‘ನೀನೇ ನೀನೇ ನಮಗೆಲ್ಲಾ ನೀನೇ’ ಎಂದು ಖುಷಿಯಾಗಿ ಹಾಡಲು ಶುರುವಿಟ್ಟರು. ಹೌದಲ್ವ ಅಪ್ಪೂ…
ಈಗ ಏನಾಗಿದೆ ಅಂದ್ರೆ- ನೀನು ಪವರ್ ಸ್ಟಾರ್ ಆಗಿದೀಯ. ಜಾಸ್ತಿ ಸಂಭಾವನೆ ಪಡೆಯೋ ಹೀರೋ ಎಂಬ ಪಟ್ಟ ದಕ್ಕಿದೆ. ‘ಅಪ್ಪು ಸಿನಿಮಾ ಅಂದ್ರೆ ಸ್ವೀಟ್ ಸ್ವೀಟ್. ಅಲ್ಲಿ ಅಶ್ಲೀಲ ಸಂಭಾಷಣೆ ಇರಲ್ಲ. ಎಕ್ಸ್ಪೋಸ್ ಇರಲ್ಲ. ಐಟಂ ಸಾಂಗ್ ಇರಲ್ಲ. ಡಬ್ಬಲ್ ಮೀನಿಂಗ್ ಡೈಲಾಗೂ ಇರಲ್ಲ. ಒಂದೇ ಮಾತಲ್ಲಿ ಹೇಳೋದಾದ್ರೆ-‘ಅಪ್ಪು’ ಸಿನಿಮಾಗಳು ಅಣ್ಣಾವ್ರ ಸಿನಿಮಾ ಥರಾನೇ ಇರ್ತವೆ. ಅವನ ಪ್ರತಿ ಸಿನಿಮಾದಲ್ಲೂ ಒಂದು ಸಂದೇಶ ಇರುತ್ತೆ ಎಂಬ ಮಾತು ಎಲ್ಲರಿಂದಲೂ ಕೇಳಿ ಬರ್ತಾ ಇದೆ. ಹೀಗೆ, ನಿನ್ನ ಬರ್ತ್ಡೇ ಎಂಬುದನ್ನೇ ನೆಪವಾಗಿಟ್ಟುಕೊಂಡು ಇಷ್ಟೆಲ್ಲಾ ಹೇಳಿದ ನಂತರ ಒಂದಿಷ್ಟು ಪ್ರಶ್ನೆಗಳನ್ನೂ ಕೇಳಬೇಕು ಅನ್ನಿಸ್ತಿದೆ ರಾಜಾ…

****
ನಿಂಗೇ ಗೊತ್ತಿದೆಯಲ್ಲ ದೊರೇ, ಯಾವ ಹೀರೋನೇ ಆಗಿರಲಿ, ಅವನ ಎರಡೇ ಎರಡು ಸಿನಿಮಾ ಹಿಟ್ ಆಗಿಬಿಟ್ರೆ ಸಾಕು, ಅಭಿಮಾನಿಗಳು ಗಂಟು ಬೀಳ್ತಾರೆ. ಹೋದಲ್ಲಿ ಬಂದಲ್ಲಿ ಮುತ್ತಿಗೆ ಹಾಕ್ತಾರೆ. ಕೈ ಮುಟ್ಟಿ, ಕೆನ್ನೆ ತಟ್ಟಿ, ಮುತ್ತಿಟ್ಟು, ಹಾರ ಹಾಕಿ, ಫೋಟೊ ತೆಗೆಸ್ಕಂಡು, ಆಟೊಗ್ರಾಫ್ ಕೇಳಿ, ಕೈ ಮುಗಿದು, ಕಾಲಿಗೂ ಬಿದ್ದು… ರಾಮರಾಮಾ ಅನ್ನೋ ಹಾಗೆ ಮಾಡಿಬಿಡ್ತಾರೆ. ಅದೇ ಕಾರಣದಿಂದ ಎಷ್ಟೋ ಮಂದಿ ಅಭಿಮಾನಿಗಳಿಂದ ದೂರ ಇರುವಾಗ – ನೀನು ಪವರ್ಸ್ಟಾರ್ ಅನ್ನಿಸಿಕೊಂಡ ಮೇಲೂ ಸಾಮಾನ್ಯರಲ್ಲಿ ಸಾಮಾನ್ಯನಾಗಿ ಉಳಿದಿದೀಯ. ಹಳೇ ಫ್ರೆಂಡ್ಸು, ಹಳೇ ಅಡ್ಡಾ, ತಳ್ಳುಗಾಡಿಯ ಜೋಳ-ಕಡ್ಲೆಕಾಯಿ ರೋಡ್ ಸೈಡಿನ ಪಾನಿಪುರಿ ಅಂಗಡಿ, ಯಾವತ್ತೋ ಕೈ ಕುಲುಕಿದ ಅಭಿಮಾನಿ, ಯಾರನ್ನೂ ಮರೆತಿಲ್ಲ! ಈ ಸರಳತೇನ ಅದು ಹ್ಯಾಗೆ ಕಲಿತ್ಕೊಂಡೆ ಅಪ್ಪೂ? ಪುನೀತ್-ರಮ್ಯಾ ಜೋಡೀನ ನೋಡ್ತಾ ಇದ್ರೆ ರಾಜ್-ಭಾರತಿ ಜೋಡಿ ನೆನಪಾಗುತ್ತೆ ಅಂತಾರಲ್ಲ ಜನ, ಆಗೆಲ್ಲ ಏನನ್ಸುತ್ತೆ ಅಪ್ಪೂ? ಗಾಸಿಪ್ಗಳಿಂದ ಈಗಲೂ ಮಾರು ದೂರ ಉಳಿದಿದ್ದೀಯಲ್ಲ? ಅಷ್ಟೊಂದು ಚೆನ್ನಾಗಿ ಫೈಟು ಮಾಡ್ತೀಯಲ್ಲ; ಇಡೀ ಸಿನಿಮಾನೇ ಹೆಗಲ ಮೇಲೆ ಹೊತ್ಕೊಂಡು ಬ್ಯಾಲೆನ್ಸ್ ಮಾಡ್ತೀಯಲ್ಲ… ಈ ಮ್ಯಾಜಿಕ್ ಎಲ್ಲಾ ಎಲ್ಲಿ ಕಲಿತೆ ಅಪ್ಪೂ?
ರಾಜ್ಕುಮಾರ್ ಮಗ ಅಲ್ವೆ? ಅಪ್ಪು ಕೋಟ್ಯಾಪತಿ ಕಣ್ರೀ… ನಾವೆಲ್ಲ ಹಾಗೆ ತಿಳ್ಕಂಡಿದೀವಿ. ಅಂಥ ನೀನೂ ಯಾವಾಗಾದ್ರೂ ಒಮ್ಮೆ ಜೇಬಲ್ಲಿ ಕಾಸೇ ಇಲ್ವಲ್ಲ ಅಂತ ಪರದಾಡಿದ್ದು ಇದೆಯಾ? ನಮ್ ಥರಾನೇ ಯಾವಾಗಾದ್ರೂ ಕದ್ದು ಪಿಕ್ಚರ್ಗೆ ಹೋಗಿದ್ಯಾ? ಶಿವಣ್ಣನಷ್ಟು ಅದ್ಭುತವಾಗಿ ಡ್ಯಾನ್ಸು ಮಾಡೋಕಾಗಲ್ಲ ಎಂಬ ಗಿಲ್ಟ್ ಈಗಲೂ ಕಾಡುತ್ತಾ ಇವತ್ತಿನ ಸಂಭ್ರಮದಲ್ಲಿ ಅಪ್ಪಾಜಿ ಜತೆಗಿರಬೇಕಿತ್ತು ಅನ್ನೋ ಭಾವ ಪದೇ ಪದೆ ಜತೆಯಾಗುತ್ತಾ? ನನ್ನ ಯಶಸ್ಸಿನ ಹಿಂದೆ ಅಪ್ಪಾಜಿಯ ಆಶೀರ್ವಾದ, ಅಮ್ಮನ ಹರಕೆ, ಶಿವಣ್ಣ-ರಾಘಣ್ಣರ ಒಲುಮೆ, ಅಭಿಮಾನಿಗಳ ಅಭಿಮಾನ, ಭಗವಂತನ ದಯೆ…

ಇಷ್ಟೆಲ್ಲಾ ಇದೆ ಎಂದು ಜೋರಾಗಿ ಹೇಳಬೇಕು ಅನ್ನಿಸ್ತಾ ಇದೆಯಾ?
ಅನುಮಾನವೇ ಬೇಡ. ಕನ್ನಡಿಗರಿಗೆ ನಿನ್ನ ಮೇಲೆ ದೊಡ್ಡ ಪ್ರೀತಿಯಿದೆ. ನಂಬಿಕೆಯಿದೆ. ಅಭಿಮಾನವಿದೆ. ಹಾರೈಕೆಯಿದೆ. ನಿನ್ನ ಎಲ್ಲಾ ಸಿನಿಮಾಗಳೂ ನೂರು-ನೂರು ದಿನಾನೇ ಓಡಲಿ. ನಮ್ಮ ಪುನೀತ್ ಒಂದರ ಹಿಂದೊಂದು ಪ್ರಶಸ್ತಿ ಪಡೆಯಲಿ. ಪವರ್ ಸ್ಟಾರ್ನ ಯಶೋಗಾಥೆ ಎಲ್ಲ ಪೇಪರ್ನಲ್ಲೂ ಕವರ್ಸ್ಟೋರಿ ಆಗೇ ಬರಲಿ ಎಂಬ ಆಸೆಯಿದೆ. ಹಾಗೇನೇ- ನಮ್ ಪುನೀತು ಬರೀ ರೀಮೇಕ್ ಸಿನಿಮಾದಲ್ಲಿ ಮಾಡ್ತಾನೆ ಎಂಬ ಬೇಸರವಿದೆ. ಕಾದಂಬರಿ ಆಧಾರಿತ ಸಿನಿಮಾದಲ್ಲಿ ಮಾಡಬಾರದೇಕೆ ಎಂಬ ಪ್ರಶ್ನೆಯೂ, ಆಗ್ರಹವೂ ಒಟ್ಟಿಗೇ ಇದೆ.
ಹೌದಲ್ವಾ? ನೀನು ಜಾಣ, ಬುದ್ಧಿವಂತ. ಅದೇ ಕಾರಣದಿಂದ ಮುಂದೆ ಅಭಿಮಾನಿಗಳ ಆಸೇನ ಈಡೇರಿಸಿಬಿಡು. ಒಂದು ವೇಳೆ ಇವತ್ತು ಅಪ್ಪಾಜಿ ಇದ್ದಿದ್ರೆ ನಿಂಗೆ ಕೇಕು ತಿನ್ನಿಸಿ, ಕೆನ್ನೆಗೆ ಮುತ್ತುಟ್ಟು, ಒಮ್ಮೆ ತಬ್ಬಿಕೊಂಡು- ‘ಕಂದಾ, ನಗುನಗುತ್ತಾ ಬಾಳು ನೀನು ನೂರು ವರುಷ’ ಎಂದು ಹಾಡ್ತಾ ಇದ್ರು. ಸಮಸ್ತ ಅಭಿಮಾನಿಗಳ ಪರವಾಗಿ ಅದೇ ಮಾತು ಹೇಳುತ್ತಾ ಪತ್ರ ಮುಗಿಸ್ತೇನೆ.
ಇಲ್ಲಿನ ಪ್ರಶ್ನೆಗಳಿಗೆ ಉತ್ತರಿಸುವ ನೆಪದಲ್ಲಾದ್ರೂ ಒಂದು ಫೋನ್ ಮಾಡಿದ್ರೆ ನೀನು ಜಾಣಮರಿ. ಮಾಡದಿದ್ರೂ…
ಸ್ವಲ್ಪ ಮತ್ತು ಜಾಸ್ತಿ ಪ್ರೀತಿಯಿಂದ.

ಬಡವರು ಹೃದಯ ಶ್ರೀಮಂತರು

ಅವನು ಲಕ್ಷಾಧಿಪತಿ. ಅವನಿಗೆ, ಮಕ್ಕಳನ್ನು ತುಂಬ ಮುದ್ದಿನಿಂದ, ತುಂಬಾ ಮಮತೆಯಿಂದ ಸಾಕಿದ್ದೇನೆ ಎಂಬ ಹಮ್ಮು. ಈ ಮಾತನ್ನೂ ಆತ ಮತ್ತೆ ಮತ್ತೆ ಮಕ್ಕಳ ಮುಂದೆ ಹೇಳುತ್ತಲೇ ಇದ್ದ. ಈತ ಎಷ್ಟೇ ಹೇಳಿದರೂ ಒಬ್ಬ ಮಗ ಮಾತ್ರ ಆ ಮಾತಿಗೂ ತನಗೂ ಸಂಬಂಧವೇ ಇಲ್ಲ ಎಂಬಂತೆ ಉಳಿದುಬಿಟ್ಟಿದ್ದ. ಅವನಿಗೆ ಹೇಗಾದರೂ ತನ್ನ ಪ್ರೀತಿ ಮತ್ತು ಶ್ರೀಮಂತಿಕೆ ಎರಡರ ಪರಿಚಯವನ್ನೂ ಮಾಡಿಕೊಡಬೇಕು ಎಂದು ಲಕ್ಷಾಧಿಪತಿ ತಂದೆಗೆ ಅನಿಸಿತು. ಈ ಸಂಬಂಧವೇ ಒಂದೆರಡು ದಿನ ಯೋಚಿಸಿದವನು, ಕಡು ಬಡವರು ಜೀವಿಸುತ್ತಿರುವ ಪ್ರದೇಶಕ್ಕೆ ಮಗನೊಂದಿಗೆ ಭೇಟಿ ಕೊಡಬೇಕು. ಅಲ್ಲಿ ಒಂದೆರಡು ದಿನ ತಂಗಿದ್ದು, ನಂತರ ವಾಪಸಾಗೋಣ. ಈ ಸಂದರ್ಭದಲ್ಲಿ ಬಡವರ ಮಕ್ಕಳ ಬವಣೆಯನ್ನು ಅರಿತು ಮಗ ತನ್ನೆಡೆಗೆ ಆರಾಧನಾ ಭಾವ ಬೆಳೆಸಿಕೊಳ್ಳುತ್ತಾನೆ ಎಂಬುದು ಆ ತಂದೆಯ ಅನಿಸಿಕೆಯಾಗಿತ್ತು.ಸರಿ, ಎರಡು ದಿನಗಳ ನಂತರ ತಂದೆ-ಮಗ ಇಬ್ಬರೂ ಪ್ರವಾಸ ಹೊರಟೇಬಿಟ್ಟರು. ಮಗನಿಗೆ ಪ್ರವಾಸದ ವಿವರ ಏನೇನೂ ಗೊತ್ತಿರಲಿಲ್ಲ. ಈ ಲಕ್ಷಾಧಿಪತಿ ತಂದೆ ಕಡುಬಡವರು ವಾಸವಿದ್ದ ಒಂದು ಹಳ್ಳಿಗೆ ಹೋಗಿ, ಅಲ್ಲಿಯೇ ನಾಲ್ಕು ದಿನ ತಂಗಿದ್ದೂ ಆಯಿತು. ನಂತರ ವಾಪಸ್ ತನ್ನ ಶ್ರೀಮಂತ ಬಂಗಲೆಗೆ ಮಗನೊಂದಿಗೆ ಬಂದ. ಪ್ರವಾಸ ಕುರಿತು ಮಗನಿಗೆ ಏನೆನ್ನಿಸಿದೆ ಎಂದು ತಿಳಿಯುವ ಆಸೆಯಾಯಿತಲ್ಲ, ಆ ಕ್ಷಣದಲ್ಲೇ ಮಗನನ್ನು ಕರೆದು ಕೇಳಿದ: ಕಂದಾ, ಮೊನ್ನೆ ಪ್ರವಾಸ ಹೋಗಿದ್ದೆವಲ್ಲ, ನಿಂಗೆ ಏನನ್ನಿಸ್ತು?’”ಅಪ್ಪಾ, ಅದೊಂದು ಅದ್ಭುತ ಅನುಭವ…’ ಅಂದ ಮಗ.”ಸರಿ. ನಿನ್ನ ಮಾತು ಒಪ್ಕೊಂಡೆ. ಪ್ರವಾಸದಲ್ಲಿ ಬಡವರು, ಅವರ ಮಕ್ಕಳು ಬದುಕುವುದನ್ನು ನೋಡಿದೆಯಲ್ಲ, ಅದರಿಂದ ಏನು ಕಲಿತುಕೊಂಡೆ?’ ಈ ತಂದೆಯ ಪ್ರಶ್ನೆ.ಅಪ್ಪಾ, ನಾನು ಆ ಪ್ರವಾಸದಿಂದ ಅದೆಷ್ಟೋ ವಿಷಯಗಳನ್ನು ತಿಳಿದುಕೊಂಡೆ. ಹೇಳ್ತಾ ಹೋಗ್ತೀನಿ ಕೇಳಿ, ಅಂದವನೇ ಹೀಗೆಂದ: “ನಾವು ಲಕ್ಷಾಧಿಪತಿಗಳು. ಆದರೇನು? ನಮ್ಮ ಮನೇಲಿ ಒಂದೇ ಒಂದು ನಾಯಿ ಇದೆ. ಆ ಹಳ್ಳಿಯಲ್ಲಿದ್ದವರು ಕಡುಬಡವರು. ಆದರೆ ಅವರ ಬಳಿ ನಾಲ್ಕು ನಾಯಿಗಳಿವೆ. ನಮ್ಮ ಬಂಗಲೆಯೊಳಗೆ ಒಂದು ಪುಟ್ಟ ಸ್ವಿಮ್ಮಿಂಗ್ ಫೂಲ್ ಇದೆ. ಆದರೆ, ಅವರ ಮನೆಯ ಹಿಂದೆ ದೊಡ್ಡ ನದಿಯೇ ಇದೆ. ನಾವು ರಾತ್ರಿ ಮಲಗಿದಾಗ ಬೆಡ್‌ರೂಂನ ಮಿಣುಕು ದೀಪ ಮಾತ್ರ ಕಾಣುತ್ತೆ. ಆದರೆ, ಆ ಬಡವರು ಬಯಲಲ್ಲಿ ಅಂಗಾತ ಮಲಗಿ ನಕ್ಷತ್ರಗಳನ್ನು ಲೆಕ್ಕ ಹಾಕ್ತಾರೆ!ನಮಗಿರೋದು ಒಂದೇ ಕಡೆ ತೋಟ. ಆದ್ರೆ ಅವರಿಗೆ ಹತ್ತಾರು ಹೊಲಗಳಿವೆ. ನಮ್ಮ ಸೇವೆಗೆ ಅಂತಾನೇ ನಾವು ಆಳುಗಳನ್ನು ಇಟ್ಕೊಂಡಿದೀವಿ. ಆದ್ರೆ ಆ ಬಡವರು ತಮಗಿಂತ ಬಡವರ ಸೇವೆಗೆ ನಿಲ್ತಾರೆ. ನಮಗೆ, ನಮ್ಮ ಸಂಪತ್ತಿಗೆ ಏನೂ ತೊಂದರೆ ಆಗದೇ ಇರಲಿ ಅಂತ ನಾವು ಮನೆಯ ಸುತ್ತ ದೊಡ್ಡ ಕಾಂಪೌಂಡ್ ಹಾಕ್ಕೊಂಡಿದೀವಿ. ಆದ್ರೆ ಆ ಬಡವರು, ಸುತ್ತಲೂ ಗೆಳೆಯರನ್ನು ಇಟ್ಕೊಂಡು ನೆಮ್ಮದಿಯ ಬದುಕು ನಡೆಸ್ತಾ ಇದಾರೆ! ನಾವು ಶ್ರೀಮಂತರ ಮಕ್ಕಳ ಜತೆ ಆಡೋದೇ ಗೌರವ ಅಂದ್ಕೊಂಡಿದೀವಿ. ಆದ್ರೆ ಆ ಬಡವರ ಮಕ್ಕಳು ಶ್ರೀಮಂತರ ಮಕ್ಕಳ ಜತೆ ಆಡೋದನ್ನು ಹೆಮ್ಮೆ ಅಂದ್ಕೊಂಡಿದಾರೆ. ಯಾರಾದ್ರೂ ಸಂಕಟಕ್ಕೆ ಸಿಕ್ಕಿ ಅಳ್ತಾ ಇದ್ರೆ ನಾವು ಕಂಡೂ ಕಾಣದವರ ಥರಾ ಹೋಗಿಬಿಡ್ತೀವಿ. ಆದ್ರೆ ಆ ಜನ, ಅದು ತಮ್ಮದೇ ಕಷ್ಟ ಅಂದುಕೊಂಡು ಸುಖ-ದುಃಖ ವಿಚಾರಿಸ್ತಾರೆ- ಹೌದಪ್ಪಾ, ನಮ್ಮಲ್ಲಿ ಶ್ರೀಮಂತಿಕೆಯಿದೆ. ಆದರೆ, ಆ ಬಡವರ ಬಳಿ ಹೃದಯ ಶ್ರೀಮಂತಿಕೆಯಿದೆ…’ ಅಂದುಬಿಟ್ಟ.ಮಗನ ಮಾತು ಕೇಳಿ ಆ ಲಕ್ಷಾಧಿಪತಿ ತಂದೆಗೆ ಕಣ್ತುಂಬಿ ಬಂತು. ಆತ ಏನೆಂದೂ ಮಾತನಾಡದೆ ಮಗನನ್ನು ಬಾಚಿ ತಬ್ಬಿಕೊಂಡ.

ಸಾವಿನ ಸುದ್ದಿ ಕೇಳಿ ಅವನು ಖುಷಿ ಪಡುತ್ತಿದ್ದ!

ಅದೊಂದು ಪ್ರೈವೇಟ್ ಕಂಪನಿ. ಅಲ್ಲಿನ ಬಾಸ್ ವಿಪರೀತ ಸಿಡಿಮಿಡಿಯ ಮನುಷ್ಯ. ಅವನೊಂದಿಗೆ ಕೆಲಸ ಮಾಡುತ್ತಿದ್ದ ನೌಕರರನ್ನು ಇನ್ನಿಲ್ಲದಂತೆ ಕಾಡಿದ್ದ. “ಅತೀ’ ಅನ್ನಿಸುವಂತಿದ್ದ ಅವನ “ಶಿಸ್ತಿ’ನಿಂದ ಎಲ್ಲ ನೌಕರರೂ ಸುಸ್ತೆದ್ದು ಹೋಗಿದ್ದರು. ಈ ಕಂಪನಿಯೂ ಬೇಡ. ಬಾಸ್‌ನ ಸಿಡಿಮಿಡಿಯೂ ಬೇಡ. ಆತ ಕೊಡುವ ಸಂಬಳವೂ ಬೇಡ ಎಂದು ಅದೆಷ್ಟೋ ಬಾರಿ ಅಂದುಕೊಂಡಿದ್ದರು. ಆದರೆ, ಒಮ್ಮೆ ಕೆಲಸ ಬಿಟ್ಟರೆ, ತಕ್ಷಣದಲ್ಲಿಯೇ ಬೇರೊಂದು ಕಡೆ ಕೆಲಸ ಸಿಗುವುದು ಕಷ್ಟವಿತ್ತು. ಹಾಗೆಂದೇ ಎಲ್ಲ ನೌಕರರೂ ಬಾಸ್‌ನ ಬೈಗುಳ ಮತ್ತು ಅವನ ಕಿರಿಕಿರಿಯನ್ನು ಸಹಿಸಿಕೊಂಡಿದ್ದರು.ಹೀಗಿದ್ದಾಗಲೇ ಅದೊಮ್ಮೆ ಬಾಸ್‌ಗೆ ಆರೋಗ್ಯ ಹದಗೆಟ್ಟಿತು. ಬಿ.ಪಿ. ಹೆಚ್ಚಿತು. ಶುಗರ್ ನಿಯಂತ್ರಣಕ್ಕೇ ಸಿಗಲಿಲ್ಲ. ದುಬಾರಿ ಚಿಕಿತ್ಸೆ ನೀಡಿದರೂ ಬಾಸ್ ಬದುಕಲಿಲ್ಲ. ನಾಲ್ಕು ದಿನಗಳ ನಂತರ ಅವನ ಮನೆಗೆ ಒಂದು ಫೋನ್ ಬಂತು. ಆ ಕಡೆಯಿಂದ ಮಾತಾಡಿದ ವ್ಯಕ್ತಿ- “ನಾನು ಬಾಸ್ ಜತೆ ಮಾತಾಡಬೇಕು. ನಾನು ಅವರ ಕಂಪನಿಯಲ್ಲಿ ಕೆಲಸ ಮಾಡುವ ನೌಕರ’ ಎಂದ.ದೂರವಾಣಿ ಕರೆ ಸ್ವೀಕರಿಸಿದಾಕೆ ಬಾಸ್‌ನ ಹೆಂಡತಿ. ಪಾಪ, ಈ ನೌಕರನಿಗೆ ಬಾಸ್ ಮೃತಪಟ್ಟ ಸುದ್ದಿ ತಿಳಿದಿಲ್ಲವೇನೋ ಅಂದುಕೊಂಡು- “ನಿಂಗೆ ಗೊತ್ತಿಲ್ವೇನಪ್ಪಾ, ನಿಮ್ಮ ಬಾಸ್ ತೀರಿಕೊಂಡು ಆಗಲೇ ನಾಲ್ಕು ದಿನ ಆಯ್ತು’ ಅಂದು ಫೋನ್ ಇಟ್ಟಳು. ಮರುದಿನ ಅದೇ ವ್ಯಕ್ತಿ ಮತ್ತೆ ಫೋನ್ ಮಾಡಿದ. ಆಗಲೂ ಬಾಸ್ ಹೆಂಡತಿಯೇ ಫೋನ್ ಎತ್ತಿಕೊಂಡು “ಹಲೋ’ ಎಂದಳು. ಈತ “ಬಾಸ್ ಜತೆ ಮಾತಾಡಬೇಕಿತ್ತಮ್ಮಾ. ನಾನು ಅವರ ಕಂಪನಿಯ ನೌಕರ’ ಎಂದ.ಬಾಸ್ ಹೆಂಡತಿಗೆ ನೌಕರನ ದನಿಯ ಪರಿಚಯ ತಕ್ಷಣವೇ ಗೊತ್ತಾಯಿತು. ಆದರೂ, ಬಾಸ್ ಮೇಲಿನ ಅಪಾರ ಪ್ರೀತಿಯಿಂದ ಒಂದು ರೀತಿಯ ಡಿಫ್ರೆಶನ್‌ಗೆ ಒಳಗಾಗಿ ಅವನು ಹೀಗೆ ಮಾಡುತ್ತಿರಬಹುದು ಅನ್ನಿಸಿ ಮತ್ತೆ ಹೇಳಿದಳು: “ನಿಮ್ಮ ಬಾಸ್ ಐದು ದಿನಗಳ ಹಿಂದೆ ತೀರಿಕೊಂಡರು ಕಣಪ್ಪಾ… ಸಾರಿ…’ಮರುದಿನ ಮತ್ತೆ ಅವನು ಫೋನ್ ಮಾಡಿದ. ಈಕೆ ಹಲೋ ಅಂದ ತಕ್ಷಣ “ನಾನು ಬಾಸ್ ಜತೆ ಮಾತಾಡಬೇಕಿತ್ತು’ ಅಂದ. ಈಕೆಗೆ ಸ್ವಲ್ಪ ಸಿಟ್ಟೇ ಬಂತು. ಆದರೂ ತಡೆದುಕೊಂಡು-“ಅವರು ವಾರದ ಹಿಂದೆ ತೀರಿ ಹೋದರು. ನಿಮಗೆ ಗೊತ್ತಿಲ್ವಾ’ ಎಂದು ಫೋನ್ ಇಟ್ಟಳು.ಈ ಭೂಪ ಅದರ ಮರುದಿನ ಮತ್ತೆ ಫೋನ್ ಮಾಡಿ- “ಬಾಸ್ ಜತೆ ಮಾತಾಡಬೇಕಿತ್ತೂ…. ನಾನು ಅವ ರ ಕಂಪನಿಯ ಕೆಲಸಗಾರ… ಎಂದು ಬಿಟ್ಟ. ಈಕೆಗೆ ಕೆಂಡಾಮಂಡಲ ಸಿಟ್ಟು ಬಂತು. ತಕ್ಷಣವೇ ಹೇಳಿದಳು- “ನಾನ್‌ಸೆನ್ಸ್, ನೀನು ನಾಲ್ಕು ದಿನದಿಂದಲೂ ಫೋನ್ ಮಾಡ್ತಾ ಇದೀಯ. ಬಾಸ್ ಇಲ್ಲ. ಅವರು ಸತ್ತು ಹೋದ್ರು ಅಂತ ನಾನು ದಿನಾ ದಿನ ಹೇಳ್ತಾನೇ ಇದೀನಿ. ಆದ್ರೂ ನೀನು ಫೋನ್ ಮಾಡೋದು ನಿಲ್ಲಿಸಿಲ್ಲ. ಯಾಕೆ ಹೀಗೆ ಮಾಡ್ತಾ ಇದೀಯ? ಮೊದಲು ಫೋನ್ ಇಡು…’ಈ ನೌಕರ ಹಹ್ಹಹ್ಹಹ್ಹಹಾ ಎಂದು ನಗುತ್ತಾ ಹೀಗೆಂದ: “ಅಮ್ಮಾವರೇ, ಬಾಸ್ ಜತೆ ಮಾತಾಡಬೇಕು ಅಂದ ತಕ್ಷಣ ನೀವು ಹೇಳ್ತೀರಲ್ಲ? ಆ ಮಾತು ಕೇಳಿದಾಗ ನಂಗೆ ಎಷ್ಟು ಖುಷಿಯಾಗುತ್ತೆ ಗೊತ್ತ?*

ಮಗನ ಪ್ರಶ್ನೆ ಕೇಳಿ ಅಪ್ಪ ಮುತ್ತಿಡುತ್ತಿದ್ದ !

ಅದೊಂದು ಮಧ್ಯಮ ವರ್ಗದ ಕುಟುಂಬ. ಆ ಮನೆಯಲ್ಲಿದ್ದವರು ಐದೇ ಜನ. ಅಪ್ಪ-ಅಮ್ಮ, ಮಗ-ಸೊಸೆ ಮತ್ತು ಅವರ ಮುದ್ದು ಕಂದ. ಅಪ್ಪನಿಗೆ ಆಗಲೇ ೭೦ ವರ್ಷ ವಯಸ್ಸಾಗಿತ್ತು. ಮಗ ನೌಕರಿಗೆ ಹೋಗುತ್ತಿದ್ದ. ಅತ್ತೆ, ಸೊಸೆ ಅದು ಹೇಗೋ ಹೊಂದಿಕೊಂಡು ಬದುಕು ಸಾಗಿಸುತ್ತಿದ್ದರು. ಆ ಮನೆಯಲ್ಲಿ ಒಂದು ಮುದ್ದು ಕಂದ ಇತ್ತಲ್ಲ, ಅದೇ ಕಾರಣದಿಂದಾಗಿ ಯಾವ ಕಷ್ಟವೂ ಯಾರಿಗೂ ಗೊತ್ತಾಗದ ಹಾಗೆ ದಿನ ಕಳೆದು ಹೋಗುತ್ತಿತ್ತು.ಅದೊಂದು ಭಾನುವಾರದ ಸಂಜೆ. ನೌಕರಿಗೆ ರಜೆ ಇದ್ದ ಕಾರಣದಿಂದ ಮಗ ಮನೆಯಲ್ಲೇ ಇದ್ದ. ವರಾಂಡದಲ್ಲಿ ಸೋಫಾದ ಮೇಲೆ ಅಪ್ಪ-ಮಗ ಇಬ್ಬರೂ ಕೂತಿದ್ದರು. ಮಗ ಕಿವಿಗೆ ವಾಕ್‌ಮನ್ ಇಟ್ಟುಕೊಂಡು ಹಾಡು ಕೇಳುತ್ತಿದ್ದರೆ ಅಪ್ಪ ಪೇಪರ್ ಓದುತ್ತಿದ್ದರು. ಇದ್ದಕ್ಕಿದ್ದಂತೆ ಕಿಟಕಿಯಾಚೆಯಿಂದ ಯಾವುದೋ ಪಕ್ಷಿ ಕೂಗಿದಂತಾಯಿತು.

.”ಕಂದಾ, ಅದೇನಪ್ಪಾ ಸದ್ದು? ಹಕ್ಕಿ ಕೂಗ್ತಾ ಇರೋದಾ? ಯಾವ ಪಕ್ಷಿ ಅದೂ?’ ತಂದೆ ಕೇಳಿದರು.”ಅದು ಕಾಗೆ ಕಣಪ್ಪ’ ಮಗ ತಾತ್ಸಾರದಿಂದಲೇ ಉತ್ತರ ಹೇಳಿದ.ಒಂದೆರಡು ನಿಮಿಷಗಳ ನಂತರ ಆ ಪಕ್ಷಿ ಮತ್ತೆ ಕೂಗಿತು. ತಂದೆ ಮತ್ತೆ ಕೇಳಿದರು: ಕಂದಾ, ಯಾವ ಪಕ್ಷಿಯ ಕೂಗು ಅದು? “ಅದೇ ಕಣಪ್ಪಾ, ಅದು ಕಾಗೆ. ಕೇಳಿಸಿದ್ದ ತಕ್ಷಣ ನಿಂಗೆ ಅರ್ಥ ಆಗಲ್ವ?’ ಮಗ ಅದೇ ತಾತ್ಸಾರದಿಂದ ಉತ್ತರಿಸಿದ. ಐದು ನಿಮಿಷದ ನಂತರ ಮತ್ತೆ ಆ ಪಕ್ಷಿಯ ಸದ್ದು ಕಿಟಕಿಯಂಚಿನಿಂದ ಕೇಳಿಬಂತು. ತಂದೆ ಮತ್ತೆ ಪ್ರಶ್ನೆ ಕೇಳಿದರು. ಮಗ ಈ ಬಾರಿ ಛಕ್ಕನೆ ಮುಖ ಸಿಂಡರಿಸಿಕೊಂಡು “ಅದು ಕಾಗೆ, ಕಾಗೆ! ಎಷ್ಟು ಬಾರಿ ಹೇಳಬೇಕು ನಿಂಗೆ?’ ಎಂದು ಜೋರು ಮಾಡಿದ.ಎಂಟು ನಿಮಿಷ ಕಳೆದಿರಲಿಲ್ಲ. ಮತ್ತೆ ಆ ಪಕ್ಷಿಯ ಸ್ವರ ಕೇಳಿಸಿತು. ತಂದೆ, ಅದೇ ಶಾಂತ ಸ್ವರದಲ್ಲಿ ಮತ್ತೆ ಕೇಳಿದರು: “ಕಂದಾ, ಈ ಧ್ವನಿ ಯಾವ ಪಕ್ಷೀದು?’ಈ ಪ್ರಶ್ನೆ ಕೇಳಿ ಮಗನಿಗೆ ನಖಶಿಖಾಂತ ಕೋಪ ಬಂತು. ಆತ ದಢಾರನೆ ಮೇಲೆದ್ದು ಸೋಫಾವನ್ನು ಝಾಡಿಸಿ ಒದ್ದ. ನಂತರ ಕಿವಿಯಲ್ಲಿದ್ದ ಹಿಯರ್ ಫೋನ್‌ಗಳನ್ನು ಕಿತ್ತೆಸೆದು ಗಟ್ಟಿ ದನಿಯಲ್ಲಿ ಹೇಳಿದ: ಅದು ಕಾಗೆ ಕಾಗೆ ಕಾಗೆ ಕಾಗೆ ಕಾಗೆ! ಈಗಾಗ್ಲೇ ನಿಂಗೆ ಇದೇ ಮಾತನ್ನ ಮೂರು ಬಾರಿ ಹೇಳಿದ್ದೀನಿ. ಆದ್ರೂ ಮತ್ತೆ ಮತ್ತೆ ಕೇಳ್ತಾ ಇದೀಯ. ನನ್ನ ತಲೆ ತಿನ್ನಲಿಕ್ಕೆ ಅಷ್ಟು ಹೊತ್ತಿಂದ ಕಾಯ್ತಾ ಕೂತಿದ್ಯಾ? ಇವತ್ತು ನಿಂಗೆ ಅದ್ಯಾವ ದೊಡ್ಡ ರೋಗ ಬಂದಿದೆ?’ ಹೀಗೆಲ್ಲ ಕೂಗಾಡಿ ಬಾಯಿಗೆ ಬಂದಂತೆ ಮಾತಾಡಿದ. ನಂತರ ಮತ್ತೆ ಸೋಫಾದಲ್ಲಿ ಕೂತ.ಈ ತಂದೆ ಏನೂ ಮಾತಾಡಲಿಲ್ಲ. ಮೌನವಾಗಿ ಎದ್ದು ತಮ್ಮ ಕೋಣೆಗೆ ಹೋದರು. ಒಂದೆರಡು ನಿಮಿಷಗಳ ನಂತರ ನಡೆದು ಬಂದವರ ಕೈಯಲ್ಲಿ ಒಂದು ಹಳೆಯ ಡೈರಿಯಿತ್ತು. ಅದರಲ್ಲಿ ಗುರುತು ಮಾಡಿದ್ದ ಒಂದು ದಿನಾಂಕದ ಹಾಳೆಯನ್ನು ತೆಗೆದು ಮಗನ ಮುಂದಿಟ್ಟು ಸುಮ್ಮನೆ ಕೂತರು. ಅದು ಅಪ್ಪ ಬರೆದಿದ್ದ ಡೈರಿ ಎಂದು ಖಚಿತವಾದ ತಕ್ಷಣ ಮಗರಾಯ ಕುತೂಹಲದಿಂದ ಕಣ್ಣಾಡಿಸಿದ. ಅದರಲ್ಲಿ ಹೀಗಿತ್ತು: “ಇವತ್ತು ಮೂರು ವರ್ಷದ ನನ್ನ ಮಗನೊಂದಿಗೆ ಸೋಫಾದಲ್ಲಿ ಕೂತಿದ್ದೆ. ಅದೇ ವೇಳೆಗೆ ಕಾಗೆಯೊಂದು ಹಾರಿಬಂದು ಕಿಟಕಿಯ ಬಳಿ ಕೂತಿತು. ಮಗ ಕುತೂಹಲದಿಂದ “ಅಪ್ಪಾ, ಅದೇನು’ ಎಂದು ಕೇಳಿದ. ಅದು ಕಾಗೆ ಕಂದಾ ಎಂದು ಉತ್ತರ ಕೊಟ್ಟೆ. ಆ ನಂತರವೂ ಸತತ ೨೫ ಬಾರಿ “ಅಪ್ಪಾ, ಅದೇನು’ ಎಂದು ನನ್ನ ಮುದ್ದು ಮಗ ಕೇಳುತ್ತಲೇ ಇದ್ದ. ನಾನು ಒಂದೇ ಒಂದು ಬಾರಿಯೂ ಬೇಸರಿಸದೆ ಉತ್ತರ ಹೇಳಿದೆ. ಅಷ್ಟೇ ಅಲ್ಲ, ಒಂದೊಂದು ಬಾರಿ ಪ್ರಶ್ನೆ ಕೇಳಿದಾಗಲೂ ಮಗನನ್ನು ತಬ್ಬಿಕೊಂಡು ಮುತ್ತು ಕೊಟ್ಟೆ. ಅವನ ಕುತೂಹಲ ಮತ್ತು ಮುಗ್ಧ ಪ್ರಶ್ನೆ ನನಗೆ ತುಂಬಾ ಇಷ್ಟವಾಯಿತು…’ಇದೆಲ್ಲವನ್ನೂ ಓದುತ್ತಿದ್ದಂತೆ ಮಗನಿಗೆ ತನ್ನ ವರ್ತನೆ ಕುರಿತು ನಾಚಿಕೆಯಾಯಿತು. ಅಪ್ಪ ಬಾಲ್ಯದಲ್ಲಿ ತನ್ನನ್ನು ಅದೆಷ್ಟು ಪ್ರೀತಿಯಿಂದ ನೋಡಿಕೊಂಡಿದ್ದ ಎಂಬುದನ್ನು ನೆನೆದು ಹೆಮ್ಮೆಯಾಯಿತು. ಡೈರಿಯನ್ನು ಆತ ಇನ್ನಿಲ್ಲದ ಆಸೆಯಿಂದ ತಬ್ಬಿಕೊಂಡು ಗದ್ಗದನಾಗಿ ಕೇಳಿದ- ನನ್ನನ್ನು ಕ್ಷಮಿಸ್ತೀರಾ ಅಪ್ಪಾ…’

ಅವಳ ಮಾತು ಕೇಳಿ ಡಾಕ್ಟರ್ ಸುಸ್ತಾದರು

ಆ ಹೆಂಗಸು ಗಂಡನೊಂದಿಗೆ ದಂತ ಚಿಕಿತ್ಸಾಲಯದೊಳಕ್ಕೆ ಗಡಿಬಿಡಿಯಿಂದ ನಡೆದು ಬಂದಳು. ರೋಗಿಗಳು ಅಂದರೆ ವೈದ್ಯರಿಗೆ ಅದೆಂಥದೋ ಪ್ರೀತಿ ತಾನೆ? ಅದೇ ಕಾರಣದಿಂದ ವೈದ್ಯರು ಬನ್ನಿ ಬನ್ನಿ. ಕೂತ್ಕೊಳ್ಳಿ, ಏನ್ಸಮಾಚಾರ ಎಂದರು.ಈಕೆ ಗಡಿಬಿಡಿಯಿಂದಲೇ ಹೇಳಿದಳು. “ನಾವು ಈ ಊರಿನವರಲ್ಲ ಡಾಕ್ಟ್ರೇ. ನಮ್ದು ಬೇರೆ ಊರು. ಇಲ್ಲಿ ಒಂದು ಮದುವೆಗೇಂತ ಬಂದಿದ್ವಿ. ಊಟ ಮುಗಿಸಿದ್ದೇ ಗೊತ್ತು. ಆವಾಗಿನಿಂದ ಹಾಳಾದ್ದು ವಿಪರೀತ ಹಲ್ಲುನೋವು ಶುರುವಾಗಿಬಿಟ್ಟಿದೆ ಡಾಕ್ಟ್ರೆ. ಅದೂ ದವಡೆ ಹಲ್ಲು. ಬೇಗ ಕಿತ್ತು ಬಿಡ್ತೀರ? ಇನ್ನು ಒಂದು ಗಂಟೆ ನಂತರ ನಮ್ಮೂರಿಗೆ ಬಸ್ ಇದೆ…’ಹಲ್ಲು ಕೀಳಲು ಡಾಕ್ಟರ್ ಸಿದ್ಧರಾದರು. ಅದಕ್ಕೂ ಮುಂಚೆ-ಹಲ್ಲಿನ ಮಹತ್ವ ವಿವರಿಸಬೇಕು ಅನ್ನಿಸಿ ಹೀಗೆಂದರು: “ನೋವು ಬಂದಿರೋದು ದವಡೆ ಹಲ್ಲಿಗೆ ಅಂತೀರ, ಹಾಗಾದ್ರೆ ಅದು ಹುಳುಕು ಬಂದಿರಬೇಕು. ಹಲ್ಲು ಮತ್ತು ಕಣ್ಣಿನ ಮಧ್ಯೆ ನೇರ ಸಂಪರ್ಕವಿದೆ. ದವಡೆಯಿಂದ ಕಣ್ಣಿನವರೆಗಿನ ಹಾದಿಯಲ್ಲಿ ಅದೆಷ್ಟೋ ಸೂಕ್ಷ್ಮ ನರಗಳಿವೆ. ಹಾಗಿರುವಾಗ ಛಕ್ ಅಂತ ಒಮ್ಮೆಗೇ ಹಲ್ಲು ಕಿತ್ರೆ ನರಗಳು ದುರ್ಬಲವಾಗಬಹುದು. ಅದರಿಂದ ಕಣ್ಣಿಗೆ ತೊಂದರೆ ಆಗಬಹುದು. ಒಂದು ಕೆಲಸ ಮಾಡೋಣ. ಮೊದಲು ಹಲ್ಲುಗಳನ್ನು ಕ್ಲೀನ್ ಮಾಡ್ತೀನಿ. ಆಮೇಲೆ ಅನಸ್ತೇಶಿಯಾ ಇಂಜಕ್ಷನ್ ಕೊಡ್ತೀನಿ. ಅದಾದ ಮೇಲೆ ಹಲ್ಲು ಕೀಳ್ತೀನಿ. ಸರೀನಾ?’ಡಾಕ್ಟರ್ ಮಾತು ಮುಗಿದದ್ದೇ ತಡ, ಆ ಹೆಂಗಸು ಹೇಳಿದಳು: “ಅಯ್ಯೋ, ಅದೆಲ್ಲಾ ರಾಮಾಯಣ ಯಾಕೆ ಡಾಕ್ಟ್ರೆ? ಹೋದ್ರೆ ಒಂದಷ್ಟು ರಕ್ತ ಹೋಗುತ್ತೆ ತಾನೆ? ಹೋಗ್ಲಿ ಬಿಡಿ. ಒಂದೆರಡು ಗಂಟೆ ತುಂಬಾ ನೋವಿರುತ್ತೆ ತಾನೆ? ಇರಲಿ ಬಿಡಿ. ಆದರೆ ಬೇಗ ಬೇಗ ಹಲ್ಲು ಕಿತ್ತು ಬಿಡಿ. ಇಕ್ಕಳ ಹಾಕಿ ಛಕ್ ಅಂತ ಎಳೆದ್ರೆ ಆಯ್ತಪ್ಪ. ಮೊದಲೇ ಹೇಳಿದೆನಲ್ಲ, ನಾವು ಊರಿಗೆ ಹೋಗಲಿಕ್ಕಿದೆ ಅಂತ, ಅದಕ್ಕೇ ಕೇಳ್ತಿರೋದು-ಬೇಗ ಹಲ್ಲು ಕಿತ್ತು ಬಿಡಿ ಡಾಕ್ಟ್ರೇ… ಅನಸ್ತೇಶಿಯಾ ಗಿನಸ್ತೇಶಿಯಾ ಏನೂ ಬೇಡ…’ತಮ್ಮ ಇಪ್ಪತ್ತು ವರ್ಷದ ವೃತ್ತಿ ಬದುಕಿನಲ್ಲಿ ಇಂಥ ಧೈರ್ಯವಂತೆಯನ್ನು ಆ ವೈದ್ಯರು ಕಂಡಿರಲಿಲ್ಲ. ಅನಸ್ತೇಶಿಯಾ ಇಂಜಕ್ಷನ್ ಕೊಡದೇ ದವಡೆ ಹಲ್ಲು ಕೀಳಿ ಎನ್ನಬೇಕಾದರೆ ಈಕೆ ಸಖತ್ ಗಟ್ಟಿಗಿತ್ತಿ ಇರಬೇಕು ಅಂದುಕೊಂಡೇ ಹೇಳಿದರು: “ಏನೇ ಹೇಳಿ ತಾಯಿ, ಧೈರ್ಯ ಅಂದ್ರೆ ನಿಮ್ದು. ನಿಮ್ಮಂಥ ಗಟ್ಟಿ ಗುಂಡಿಗೆಯ ಹೆಂಗಸನ್ನು ನಾನು ನೋಡಿಯೇ ಇಲ್ಲ. ಸರಿ, ನೀವು ಹೇಳಿದಂತೆಯೇ ಮಾಡ್ತೀನಿ. ಯಾವ ಹಲ್ಲು ನೋಯ್ತಾ ಇದೆ ತೋರಿಸ್ತೀರಾ? ಅದನ್ನು ಕಿತ್ತು ಬಿಡ್ತೀನಿ…’ಆ ಹೆಂಗಸು ತಕ್ಷಣವೇ ತನ್ನ ಗಂಡನನ್ನು ಉದ್ದೇಶಿಸಿ ಹೇಳಿದಳು: “ಹಲ್ಲು ನೋವು ಅಂತ ಬಡ್ಕೋತಿದ್ರಲ್ಲ, ಡಾಕ್ಟ್ರು ಕೇಳ್ತಾ ಇದಾರೆ. ಬೇಗ ತೋರ್‍ಸಿ. ಆ ಹಾಳಾದ್ದನ್ನು ಕಿತ್ತು ಎಸೆದು ಊರಿಗೆ ಹೋಗಿಬಿಡೋಣ…’ಈ ಮೊದಲು ಆಕೆಯ ಧೈರ್‍ಯದ ಮಾತು ಕೇಳಿ ಒಮ್ಮೆ ಸುಸ್ತಾಗಿದ್ದ ಡಾಕ್ಟರು ಹಲ್ಲು ನೋವು ಯಾರಿಗೆಂದು ತಿಳಿದ ನಂತರ ಮತ್ತೆ ಸುಸ್ತಾದರು.

ತೇಜಸ್ವಿ ಕೆಲವು ನೆನಪುಗಳು

null

ಅದು ಲಂಕೇಶರು ಪ್ರಗತಿರಂಗ ಆರಂಭಿಸಿದ್ದ ಸಂದರ್ಭ. ಪತ್ರಿಕೆಯ ಮೂಲಕ ಲಕ್ಷಾಂತರ ಓದುಗರ ಮನಸ್ಸು ಗೆದ್ದಷ್ಟೇ ಸುಲಭವಾಗಿ ಅವರ ಮತಗಳನ್ನೂ ಪಡೆಯಬಹುದು ಎಂಬ ವಿಚಿತ್ರ ಭ್ರಮೆ ಲಂಕೇಶರಿಗಿತ್ತು. ಅದೊಮ್ಮೆ ಯಾವುದೇ ವಿಷಯ ಪ್ರತಿಭಟಿಸಲು ಒಂದು ಪ್ರತಿಭಟನಾ ಸಭೆ ಏರ್ಪಡಿಸಿಯೇ ಬಿಟ್ಟರು ಲಂಕೇಶ್. ಸಭೆಗೆ ತೇಜಸ್ವಿಯವರನ್ನೂ ಆಹ್ವಾನಿಸಿದರು. ಬಸವನಗುಡಿಯ ಲಂಕೇಶ್ ಪತ್ರಿಕೆ ಕಚೇರಿಯಿಂದ ನ್ಯಾಷನಲ್ ಕಾಲೇಜಿನವರೆಗೆ ಮೆರವಣಿಗೆ ಹೋಗುವುದೆಂದು ತೀರ್ಮಾನವಾಯಿತು. ಮೆರವಣಿಗೆಗೆ ಭಾರೀ ಜನಬೆಂಬಲ ಸಿಗಲಿಲ್ಲ. ನಂತರ ಲಂಕೇಶ್ ಪತ್ರಿಕೆಗೆ ಕಚೇರಿಯಲ್ಲಿ ಗೆಳೆಯರು ಸಭೆ ಸೇರಿದಾಗ ತೇಜಸ್ವಿ ಹೇಳಿಯೇಬಿಟ್ಟರು:ರೀ ಲಂಕೇಶ್, ಏನ್ರೀ ಇದು, ನಿಮ್ಗೆ ಬುದ್ಧಿ ಗಿದ್ದಿ ಇದೆಯೇನ್ರಿ? ಈ ರಾಜಕೀಯ ಹೊಲಸೆದ್ದು ಹೋಗಿದೆ. ರಾಜಕಾರಣಿಗಳು ಕುಲಗೆಟ್ಟು ಹೋಗಿದಾರೆ. ಅವರ ಮಧ್ಯೆ ನುಗ್ಗಿ, ಹೋರಾಡ್ತೀನಿ ಅಂತೀರಲ್ಲ, ಇದೆಲ್ಲ ಆಗುವ ಹೋಗುವ ಕೆಲಸವಾ? ಇದು ಬಿಟ್ಟು ನಿಮ್ಗೆ ಬೇರೆ ಏನೂ ಕೆಲಸ ಇರಲಿಲ್ವ?* ೧೯೮೩-೮೪ರಲ್ಲಿ ನಡೆದ ಪ್ರಸಂಗ. ಆಗ ರೈತ ಸಂಘದ ಅಬ್ಬರ ಜೋರಾಗಿತ್ತು. ರೈತ ವಿದ್ಯಾರ್ಥಿ ಒಕ್ಕೂಟವೂ ಹುಟ್ಟಿಕೊಂಡಿತ್ತು. ವಿದ್ಯಾರ್ಥಿ ನಾಯಕರಿಗೆ ತೇಜಸ್ವಿಯವರನ್ನು ಸಭೆಗೆ ಕರೆ ತರಬೇಕೆಂಬ ಆಸೆ. ಅದು ಹೇಗೋ ತೇಜಸ್ವಿಯವರನ್ನು ಒಪ್ಪಿಸಿದ್ದಾಯಿತು. ರೈತ ಸಂಘದ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿ ಮುಖಂಡರು ಗಂಭೀರ ಚರ್ಚೆಯಲ್ಲಿ ಮುಳುಗಿದ್ದಾಗ ತೇಜಸ್ವಿ ಛಕ್ಕನೆ ಹೀಗೆಂದರು..””ಹೋಗ್ರೋ ಹೋಗ್ರೋ, ನಿಮ್ದೆಲ್ಲಾ ಬರೀ ಬೂಟಾಟಿಕೆ. ಈಗ ಮಾತ್ರ ಕ್ರಾಂತಿ ಕ್ರಾಂತಿ ಅಂತ ಕೊಚ್ಕೋತೀರ. ಆಮೇಲೆ ವರದಕ್ಷಿಣೆ ತಗೊಂಡು ಮದುವೆಯಾಗ್ತೀರ!’*

ಕುವೆಂಪು ಅವರ ಜನ್ಮದಿನದ ಅಂಗವಾಗಿ ೨೯, ೧೯೯೮ರಲ್ಲಿ ಕುವೆಂಪು ಸಾಹಿತ್ಯ ವಿಮರ್ಶೆಯ ಕಾರ್‍ಯಕ್ರಮ ನಡೆಯಿತು. ಅದು ನಡೆದದ್ದು ಕುಪ್ಪಳಿಯ ಕಾಡಿನ ಮಧ್ಯೆ. ಆ ಕಾರ್ಯಕ್ರಮಕ್ಕೆ ನಾಡಿನ ಹೆಸರಾಂತ ವಿಮರ್ಶಕರು ಬಂದಿದ್ದರು. ಕುವೆಂಪು ಸಾಹಿತ್ಯಕ್ಕೆ ಸಂಬಂಧಿಸಿದಂತೆ ಸಭೆಗೆ ಬಂದಿದ್ದವರು ಪ್ರಶ್ನೆ ಕೇಳಿದರು. ವಿಮರ್ಶಕರು ಇದಕ್ಕೆಲ್ಲ ತಮ್ಮದೇ “ಲೆವೆಲ್’ನ ಗ್ರಾಂಥಿಕ ಭಾಷೆಯಲ್ಲಿ ಉತ್ತರ ಕೊಟ್ಟರು. ಅಲ್ಲಿ ಒಬ್ಬ ಪ್ರೇಕ್ಷಕನಂತೆ ಕೂತಿದ್ದ ತೇಜಸ್ವಿ ತಾವೂ ಒಂದು ಪ್ರಶ್ನೆ ಹಾಕಿದರು. ತಕ್ಷಣವೇ ವರಸೆ ಬದಲಿಸಿದ ಚಿಂತಕರು ಆಡುಭಾಷೆಯಲ್ಲಿ ಉತ್ತರ ಹೇಳಿಬಿಟ್ಟರು. ಆಗ ತೇಜಸ್ವಿ- “ಎಲ್ಲ ಪ್ರಶ್ನೆಗೂ ಇದೇ ಭಾಷೇಲಿ ಉತ್ತರ ಹೇಳ್ರಯ್ಯ. ಎಲ್ಲ ಜನರಿಗೂ ಅರ್ಥವಾಗುವ ಹಾಗೆ ಬೊಗಳಿ’ ಎಂದು ಚಿಂತಕರನ್ನೆಲ್ಲ ಬೆಚ್ಚಿ ಬೀಳಿಸಿದ್ದರು.* ತೇಜಸ್ವಿಯವರ “ಕರ್ವಾಲೋ’ ಪಿಯುಸಿಗೆ ಪಠ್ಯವಾಗಿದ್ದ ಸಂದರ್ಭ. ವಯೋ ಸಹಜ ಕುತೂಹಲದ ಕಾರಣವೇ ಇರಬೇಕು-ಕರ್ವಾಲೋ ಎಲ್ಲ ವಿದ್ಯಾರ್ಥಿಗಳಿಗೂ ವಿಪರೀತ ಇಷ್ಟವಾಯಿತು. ಅದರಲ್ಲಿ ಬರುವ ಹಾರುವ ಓತಿ ಎಂಬ ಜೀವಿ ಈಗಿಲ್ಲ. ಅದು (?) ಒಂದರ ಮುಂದೆ ಆರು ಸೊನ್ನೆ ಹಾಕಿದಾಗ ಬರುತ್ತಲ್ಲ, ಅಷ್ಟು ವರ್ಷದ ಹಿಂದೆ ಬದುಕಿತ್ತು ಎಂದು ತೇಜಸ್ವಿಯವರೇನೋ ಬರೆದಿದ್ದರು. ಆದರೆ ಭದ್ರಾವತಿ-ತೀರ್ಥಹಳ್ಳಿ ಸೀಮೆಯ ಮಂಜಯ್ಯ ಎಂಬ ಕಾಲೇಜು ವಿದ್ಯಾರ್ಥಿಯೊಬ್ಬ ಹಾರುವ ಓತಿಯಂಥದೇ ಜೀವೀ (?)ಯನ್ನು ಪತ್ತೆ ಹಚ್ಚಿ ಅದನ್ನು ಹಿಡಿದೂ ಬಿಟ್ಟಿದ್ದ. ಈ ವಿಷಯವಾಗಿ ತೇಜಸ್ವಿ ಹೇಗೆ ಪ್ರತಿಕ್ರಿಯಿಸಬಹುದು ಎಂಬ ಕುತೂಹಲ ಹಲವರಿಗಿತ್ತು. ಆದರೆ ತೇಜಸ್ವಿ ಹಾರಿಕೆಯ ಉತ್ತರ ಹೇಳಿ ಜಾರಿಕೊಂಡರು.ತೇಜಸ್ವಿ ಯಾಕೆ ಹಾಗೆ ಮಾಡಿದರು? ಗೊತ್ತಾಗಲಿಲ್ಲ. ಸರಳ ಸತ್ಯ ಏನೆಂದರೆ-ಅವರ ಕಥೆಗಳು ಅರ್ಥವಾಗುತ್ತಿದ್ದವು. ಆದರೆ ಬಹಳ ಸಂದರ್ಭದಲ್ಲಿ ತೇಜಸ್ವಿಯವರು ಅರ್ಥವಾಗುತ್ತಿರಲಿಲ್ಲ…* ಕುವೆಂಪು ಅವರ ನಿಧನದ ನಂತರ ತೇಜಸ್ವಿ “ಅಣ್ಣನ ನೆನಪು’ ಬರೆಯಲು ಆರಂಭಿಸಿದರು. ಲಂಕೇಶ್ ಪತ್ರಿಕೆಯಲ್ಲಿ ಈ ಲೇಖನ ಮಾಲೆ ವಾರವಾರವೂ ಪ್ರಕಟವಾಗುತ್ತಿತ್ತು. ಕುವೆಂಪು ಅವರ ಹತ್ತು ಹಲವು ಮುಖ ಅಲ್ಲಿ ಅನಾವರಣವಾಗುತ್ತಿತ್ತು. ಶೇವಿಂಗ್ ಮಾಡಿದ ನಂತರ ಆ ಬ್ಲೇಡ್‌ನ ಮೇಲೆ ೧, ೨, ೩ ಎಂದು ಕುವೆಂಪು ಪೆನ್ಸಿಲ್‌ನಿಂದ ಬರೆಯುತ್ತಿದ್ದರು. ಒಂದು ಬ್ಲೇಡ್‌ನಿಂದ ಕನಿಷ್ಠ ನಾಲ್ಕು ಬಾರಿ ಶೇವಿಂಗ್ ಮಾಡಲೇಬೇಕು ಎಂಬುದು ಅವರ ನಿರ್ಧಾರವಾಗಿತ್ತು ಎಂದೂ ಒಮ್ಮೆ ತೇಜಸ್ವಿ ಬರೆದಿದ್ದರು.

ಆಗ ಹಿರಿಯರು ಅನ್ನಿಸಿಕೊಂಡ ಅದೆಷ್ಟೋ ಜನ-ಛೆ, ಕುವೆಂಪು ಎಷ್ಟೊಂದು ದೊಡ್ಡ ಮನುಷ್ಯ. ಅವರ ಬಗ್ಗೆ ಹೀಗೆಲ್ಲಾ ಬರೀಬಹುದಾ? ಇದು ಸರಿಯಾ? ಎಂದು ಪ್ರಶ್ನಿಸಿದ್ದರು. ತೇಜಸ್ವಿ ಬರಹವನ್ನು ಕಟುವಾಗಿ ಟೀಕಿಸಿದ್ದರು.ಆಗ ತೇಜಸ್ವಿ ಹೇಳಿದ್ದು: “ಕುವೆಂಪು ನನ್ನ ತಂದೆ. ಅವರು ನಮ್ಮ, ನಿಮ್ಮಂತೆಯೇ ಒಬ್ಬ ಸಾಮಾನ್ಯ ಮನುಷ್ಯ. ಅವರಿಗೂ ರಾಗ-ದ್ವೇಷಗಳಿದ್ದವು. ಅವರದೇ ಆದ ಬದುಕಿತ್ತು. ಇದ್ದುದನ್ನು ಇದ್ದಂತೆ ಹೇಳಿದೀನಿ. ಅವರಲ್ಲಿ ತಪ್ಪೇನು ಬಂತು? ನನ್ನ ತಂದೆಯೊಂದಿಗೆ ನನಗಿದ್ದಂಥ ಒಡನಾಟ ಈ ಸಾಹಿತಿಗಳಿಗಿತ್ತೆ…’ ಅಷ್ಟೇ, ಟೀಕಿಸುತ್ತಿದ್ದ ಬಾಯಿಗಳು ಬಂದ್ ಆದವು.ತೇಜಸ್ವಿ ಬಿ.ಎ.ಯಲ್ಲಿ ಇಂಗ್ಲಿಷಿನಲ್ಲಿ ಫೇಲಾಗಿದ್ರು. ಅವರ ತರಗತಿಯಲ್ಲಿದ್ದ ಒಟ್ಟು ವಿದ್ಯಾರ್ಥಿಗಳಲ್ಲಿ ಒಬ್ಬ ಮಾತ್ರ ತೇರ್ಗಡೆಯಾಗಿದ್ದ. ಉಳಿದವರೆಲ್ಲ ಡುಮ್ಕಿ. ಸ್ವಾರಸ್ಯವೆಂದರೆ ಎಲ್ಲರೂ ಚನ್ನಾಗಿ ಉತ್ತರ ಬರೆದಿದ್ದೇವೆಂದೇ ಭಾವಿಸಿದ್ದರು. ಅದಕ್ಕೆ ಕಾರಣ- ಪರೀಕ್ಷೆಯಲ್ಲಿ ಬಹುಮಂದಿ ಊಹಿಸಿದ ಪ್ರಶ್ನೆಗಳೇ ಇದ್ದವು. ಪರೀಕ್ಷಕರು ಬೇಕೆಂದೇ ಫೇಲ್ ಮಾಡಿದ್ದಾರೆ ಎಂದು ಎಲ್ಲ ವಿದ್ಯಾರ್ಥಿಗಳೂ ಆಗ ಕುಲಪತಿಯಾಗಿದ್ದ ಕುವೆಂಪು ಅವರಿಗೇ ದೂರು ನೀಡಿದರಂತೆ. ಕುತೂಹಲದಿಂದ ಎಲ್ಲರ ಉತ್ತರ ಪತ್ರಿಕೆಗಳನ್ನೂ ತರಿಸಿ ಪರೀಕ್ಷಿಸಿದ ನಂತರ ಕುವೆಂಪು ಹೇಳಿದ್ದು: ಅಲ್ಲಯ್ಯ ತೇಜಸ್ವೀ, ಆಗಲೇ ಡಿಗ್ರಿಗೆ ಬಂದಿದೀಯ. ನಿಂಗೆ ಯಾವ ಪದಕ್ಕೆ ಯಾವ ಸ್ಪೆಲ್ಲಿಂಗ್ ಅಂತ ಗೊತ್ತಿಲ್ಲವಾ? he, she ಎಂದು ಬರೆಯಬೇಕಾದ ಜಾಗದಲ್ಲಿ hi, shi ಎಂದು ಬರೆದಿದ್ದೀಯ? ಪರೀಕ್ಷಕರು ನಿಮಗೆಲ್ಲ ೨೭ ನಂಬರ್ ಕೊಟ್ಟು ತಪ್ಪು ಮಾಡಿದಾರೆ. ನಾನಾಗಿದ್ರೆ ನಿಮಗೆಲ್ಲ ಸೊನ್ನೆ ಕೊಡ್ತಿದ್ದೆ…* ಹೌದು. ತಮ್ಮ ಅನನ್ಯ ಕಥೆಗಳ ಮೂಲಕ ನಾವು ಕನಸು ಮನಸಿನಲ್ಲೂ ಊಹಿಸಿರದ ವಿಸ್ಮಯ ಲೋಕವೊಂದನ್ನು ತೇಜಸ್ವಿ ತೆರೆದಿಟ್ಟರು. ಅದಕ್ಕೆ ಒಂದು ಪುಟ್ಟ ದೃಷ್ಟಾಂತ:”ಒಮ್ಮೆ ನಾನು ತೋಟದಲ್ಲಿ ಹೋಗುತ್ತಿದ್ದಾಗ ಮಾಸ್ತಿಯ ಮಗ ನೆಲದ ಬಿಲದಲ್ಲಿ ಇಡೀ ಕೈ ಹೋಗುವಷ್ಟು ಆಳಕ್ಕೆ ಕೈ ಹಾಕಿ ನಾನು ನೋಡುತ್ತಿದ್ದಂತೆಯೇ ಏನನ್ನೋ ತೆಗೆದು ಗಬಕ್ಕನೆ ಬಾಯಿಗೆ ಹಾಕಿಕೊಂಡು ಅಗಿದು ತಿಂದ. ದೂರದಿಂದ ಇದನ್ನು ನೋಡಿದ ನಾನು ಏನನ್ನು ತಿಂದೆ ಎಂದು ಕೇಳಿದೆ. ಅವನು “ಈಚು ಸಾಮಿ’ ಎಂದ. ಹಾಗೆಂದರೆ ಏನೆಂದು ಗೊತ್ತಾಗದೆ ಮತ್ತೆ ಕೇಳಿದೆ: ಅಯ್ಯೋ, ಈಚು ಸಾಮೀ, ಈಚು ಅಂದ್ರೆ ಗೊತ್ತಿಲ್ವಾ? ಒಂದ್ಸಾರಿ ತೋರಿಸ್ತೀನಿ. ತಡೀರಿ’ ಎಂದ… ಅವನು ತಿಂದದ್ದೇನೆಂದು ತೇಜಸ್ವಿ ಬರೆದಿಲ್ಲ. ಈಚು ಎಂದರೇನೆಂದು ಅವರಿಗೆ ಗೊತ್ತಿರಲಿಲ್ಲವಾ? ಇರಬಹುದು. ಗೊತ್ತಿತ್ತಾ? ಹಾಗೂ ಇರಬಹುದು…ತೇಜಸ್ವಿಯವರು ನಮ್ಮೆದುರು ಹರಡಿಟ್ಟ ಅದೆಷ್ಟೋ ಪಾತ್ರ-ಪ್ರಸಂಗಗಳನ್ನು ಮರೆಯಲಾದೀತೆ?