ಭಾರತ ಮಾತೆಯ ವೀರಪುತ್ರ ನಾನು..

null

ಪ್ರಿಯ ಬಂಧು,
ಹೇಗಿದ್ದೀರಿ? ಕುಶಲವಷ್ಟೆ? ಇವತ್ತು ಬೆಳಗ್ಗೆ ತಿಂಡಿಯ ಬಿಡುವಿನ ಮಧ್ಯೆ ತೀರಾ ಆಕಸ್ಮಿಕವಾಗಿ ಟಿ.ವಿ. ನೋಡಿದೆ. ‘ಕರ್ನಾಟಕದ ಹಲವು ಕಡೆಗಳಲ್ಲಿ ಭಾರೀ ಮಳೆ’ ಎಂಬ ಸುದ್ದಿ ಕಾಣಿಸಿತು. ಮರುಕ್ಷಣವೇ, ಅದೇ ಕರ್ನಾಟಕದ ಒಂದು ಮೂಲೆಯಲ್ಲಿರುವ ನನ್ನ ಊರು, ಅಲ್ಲಿನ ಜನ, ಅವರ ಸಂಕಟ, ಆ ಮಧ್ಯೆಯೇ ಸಾಗುವ ಅವರ ಬದುಕು ನೆನಪಾಯಿತು. ಹಿಂದೆಯೇ-ಬೈಛಾನ್ಸ್ ನಾನು ಈಗ ಊರಲ್ಲಿದ್ದಿದ್ರೆ- ಬೇಸಿಗೆಗೂ ಮೊದಲೇ ಶುರುವಾದ ದಿಢೀರ್ ಮಳೆಯ ಬಗ್ಗೆ ಹೇಗೆಲ್ಲ ಮಾತಾಡ್ತಾ ಇದ್ದೆನೋ ಅನ್ನಿಸಿತು.
ಹೌದಲ್ವ ಗೆಳೆಯಾ? ಈಗ ನಿನ್ನ ಕಣ್ಮುಂದೆ ಯುಗಾದಿಯ ಸಂಭ್ರಮವಿದೆ. ಹಬ್ಬಕ್ಕೆ ಇನ್ನೂ ಹದಿನೈದು ದಿನ ಬಾಕಿ ಇರುವಾಗಲೇ -ಮನೆ ಮಂದಿಗೆಲ್ಲ ಹೊಸ ಬಟ್ಟೆ ತಗೋಬೇಕು. ಎರಡು ದಿನ ಮೊದಲೇ ಊರಿಗೆ ಹೋಗಬೇಕು. ಗೆಳೆಯರು, ಬಂಧುಗಳ ಜತೆ ಆರಾಮಾಗಿ ಕಾಲ ಕಳೀಬೇಕು. ಈ ಸಲ ಬೆಳೆ ಚೆನ್ನಾಗಿ ಬಂದಿದೆಯಾ ಗಮನಿಸಬೇಕು. ಊರಿಂದ ಬರುವಾಗ ಅವ್ವನ ಕೈಗೆ ಐನೂರರ ನೋಟು ಕೊಟ್ಟು-ಇಟ್ಕೋ, ಇದು ನಿಂಗೆ ಅನ್ನಬೇಕು. ಆಕೆಗೆ ಮಮತೆಗೆ ನಗುವಾಗಬೇಕು. ತಗೊಂಡಿರೋ ಹೊಸಾ ಮೊಬೈಲ್ನಲ್ಲಿ ಅಮ್ಮ, ಅಜ್ಜಿ, ತಂಗಿಯ ಮಗಳು… ಹೀಗೆ ಎಲ್ಲರ ಫೋಟೊ ತೆಗೀಬೇಕು. ಫುಸಫುಸನೆ ಬೀಡಿ ಎಳೀತಿರ್ತಾನಲ್ಲ ಅಪ್ಪ, ಅವನ್ದೂ ಒಂದು ಫೋಟೊ ತೆಗೀಬೇಕು… ಹಳೇ ಬಟ್ಟೇಲಿರುವಾಗ್ಲೇ ಫೋಟೊ ಹೊಡ್ದಲ್ಲೇ ಮಗಾ ಎಂಬ ಅವನ ಮಾತಿಗೆ ಖುಷಿಯಿಂದ ನಗಬೇಕು… ಇಂಥವೇ ಯೋಚನೆಯಲ್ಲಿ ನೀನಿರುವಾಗಲೇ- ಯಾಕೋಪ್ಪ, ನನ್ನ ಕಥೇನ ಹೇಳ್ಕೋಬೇಕು ಅನ್ನಿಸ್ತಿದೆ. ಆದಷ್ಟೂ ನಿಂಗೆ ಬೋರು ಹೊಡೆಸದ ಹಾಗೆ ಹೇಳ್ತಾ ಹೋಗ್ತೇನೆ- ಕೇಳಿಸ್ಕೋ ಗೆಳೆಯಾ, ಪ್ಲೀಸ್…
***
ಹೌದು. ನಾನು ಯೋಧ. ಜಮ್ಮು-ಕಾಶ್ಮೀರದ ಬಾರ್ಡರ್ನಲ್ಲಿದೀನಿ. ದಿನದ ಹನ್ನೆರಡು ಗಂಟೆಯೂ ನನ್ನೆದುರು ಹಿಮಾಲಯ ಇರುತ್ತೆ. ಅದರ ಮುಂದೆ ನಾನು! ಒಂದು ವೇಳೆ ಪಿಯೂಸಿಯ ನಂತರ ಇನ್ನೊಂದಿಷ್ಟು ಓದಿದ್ರೆ ನಂಗೂ ಬೆಂಗಳೂರಲ್ಲೇ ಕೆಲಸ ಸಿಗ್ತಿತ್ತೋ ಏನೋ. ಆದರೆ ದೇಶಪ್ರೇಮದ ಬಿರುಸು ಜತೆಗಿತ್ತಲ್ಲ! ಆ ಕಾರಣದಿಂದ ಸೈನ್ಯ ಸೇರಿಕೊಂಡೆ. ಗಡಿ ಕಾಯುವ ಕೆಲಸಕ್ಕೆ ಬಂದೆ. ಈಗ, ಪ್ರತಿ ಮುಂಜಾನೆ ಎದ್ದಾಗಲೂ ನನ್ನ ಎದೆ ಸಂತೋಷದಿಂದ ಉಬ್ಬಿರುತ್ತೆ. ಇಷ್ಟೂ ದಿನ ದೇಶದ ಸೇವೆ ಮಾಡಿದೆನಲ್ಲ, ಸಾರ್ಥಕವಾಯ್ತು ಬದುಕು ಎಂಬ ಹೆಮ್ಮೆಯೇ ಅದಕ್ಕೆ ಕಾರಣ.
ಆದರೆ ಗೆಳೆಯಾ, ನಾನು ವಿರಾಗಿಯ ಪೋಸ್ ಕೊಡಲಾರೆ. ಎದೆಯೊಳಗಿರುವುದನ್ನು ಖುಲ್ಲಂಖುಲ್ಲ ಹೇಳಿಬಿಡ್ತೀನಿ. ಸದಾ ದೇಶ ಸೇವೆಯಲ್ಲಿ ಮಗ್ನರಾಗಿರುವ ಸೈನಿಕರ ಬದುಕು ಹೇಗಿದೆ ಎಂದು ಸಂಕ್ಷಿಪ್ತವಾಗಿ ಹೇಳ್ತಾ ಇದೀನಿ. ಹೌದು. ನಮ್ಮದು ಅತಂತ್ರ ಬದುಕು. ನೆಲೆ ತಪ್ಪಿದ ಬದುಕು. ಸಾವಿನೊಂದಿಗೆ ಸದಾ ಸರಸವಾಡುವ ಬದುಕು. ಈಗ ಏನೇ ಟೆಕ್ನಾಲಜಿ ಬಂದಿದೆ ಅಂದುಕೊಂಡರೂ ಆತ್ಮೀಯರಿಂದ ನಾವು ದೂರ ದೂರ. ಗಡಿ ಕಾಯುವವನು ಮೊಬೈಲು ಬಳಸುವಂತಿಲ್ಲ. ದೂರದ ದಿಲ್ಲಿಗೂ ಒಂದೇ ದಿನದಲ್ಲಿ ಹೋಗುವ ಕೊರಿಯರ್ ಸೌಭಾಗ್ಯ ಕಾಶ್ಮೀರದ ಗಡಿಯಲ್ಲಿನ ಯೋಧನಿಗಿಲ್ಲ. ಅವನಿಗೆ ಈಗಲೂ ಅಂಚೆಯಣ್ಣನೇ ಗೆಳೆಯ. ಅವನೇ ಹತ್ತಿರದ ಬಂಧು. ಅವನೇ ಸಂದೇಶವಾಹಕ.
ಹೌದಲ್ಲವಾ? ನಾವು ಆತ್ಮೀಯರಿಂದ ದೂರ ಅಂದೆ. ಗೊತ್ತಿರಬೇಕಲ್ಲ ನಿನಗೂ? ಸೇನೆಯಲ್ಲಿರುವವರು ತಮ್ಮೂರಿಗೆ ದಿನಾ ದಿನ ಫೋನ್ ಮಾಡುವಂತಿಲ್ಲ. ವಾರಕ್ಕೋ, ಹದಿನೈದು ದಿನಕ್ಕೋ, ತಿಂಗಳಿಗೋ ಒಮ್ಮೆ ಫೋನ್ ಮಾಡಿದರೂ ಗಂಟೆಗಟ್ಟಲೆ ಹರಟುವಂತಿಲ್ಲ. ಬೈಛಾನ್ಸ್, ತಂದೆಯೋ, ತಂಗಿಯೋ, ಅಮ್ಮನೋ, ಭಾವನೋ ದಿಢೀರ್ ತೀರಿಕೊಂಡರೆ ಅವರನ್ನು ನೋಡಿಹೋಗಲೂ ಬರುವಂತಿಲ್ಲ. ಹೋಗಲಿ, ಸುದ್ದಿ ತಿಳಿದ ಮೇಲಾದರೂ ನೆಮ್ಮದಿಯಿಂದ ಒಂದೆಡೆ ಕುಳಿತು ಅತ್ತು ಹಗುರಾಗೋಣ ಅಂದರೆ- ಉಹುಂ, ಅದು ಮೈಮರೆಯುವ ಕ್ಷಣವೇ ಅಲ್ಲ. ಸೆಂಟಿಮೆಂಟ್ಗೆ ಅಲ್ಲಿ ಜಾಗವಿಲ್ಲ. ಉಕ್ಕಿ ಬಂದ ಕಣ್ಣೀರು ಧುಮ್ಮಿಕ್ಕುವ ಮೊದಲೇ ಆ ಥರಥರ ಛಳಿಯ ಮಧ್ಯೆಯೇ ಇಂಗಿ ಹೋಗಬೇಕು! ವೀರಯೋಧ ಅನ್ನಿಸಿಕೊಂಡ ನಾನು ಅಳುತ್ತ ಕೂತರೆ… ಛೆ, ಅದು ಭಾರತಾಂಬೆಗೆ ಮಾಡುವ ಅವಮಾನವಲ್ಲವಾ ಗೆಳೆಯಾ?
ಇಷ್ಟಾಯಿತಲ್ಲ, ನಮ್ಮ ದಿನನಿತ್ಯದ ರೂಟೀನು ನೆನಪಿಸಿಕೊಂಡರೂ ಒಮ್ಮೊಮ್ಮೆ ದಿಗಿಲಾಗುತ್ತದೆ. ಸಂಕೋಚವೂ ಆಗುತ್ತದೆ. ಬೆಳಗ್ಗೆ ಎದ್ದವರೇ ಶೇವಿಂಗ್ ಮಾಡಲೇಬೇಕು. ಅದು ನಿಯಮ. ಶಿಸ್ತು. ಆಮೇಲೆ ಛಕ್ಕನೆ ಬಂದು ಸ್ನಾನ. ನಂತರ ಡ್ಯೂಟಿಗೆ ಎಂದು ಹೊರಟರೆ ಹೆಗಲಿಗೆ ರೈಫಲ್ಲು, ಮನದ ತುಂಬಾ ದೇಶದ ಚಿಂತೆ. ಹನ್ನೆರಡು ಗಂಟೆಯ ಕಾಫಿ, ಮಧ್ಯಾಹ್ನದ ಊಟ, ನಂತರದ ಐದೇ ನಿಮಿಷದ ತೂಕಡಿಕೆ, ಸಂಜೆಯ ಬಿಸ್ಸಿಬಿಸೀ ಟೀ, ರಾತ್ರಿ ಎಂಟೂವರೆಗೆ ಎನ್ಡಿಟೀವಿ ನ್ಯೂಸು, ಒಂಭತ್ತೂವರೆಗೆ ಭೂರೀ ಭೋಜನ, ಮಕ್ಕಳೊಂದಿಗೆ ಮಾತು, ಹತ್ತೂವರೆಗೆ ನಿದ್ದೆ… ಇಲ್ಲಣ್ಣಾ, ಅಂಥದೊಂದು ಬದುಕು ನಮಗಿಲ್ಲ. ಹವಾಮಾನದ ವೈಪರೀತ್ಯದ ಮಧ್ಯೆ ಬದುಕ್ತೀವಲ್ಲ, ಸಂಜೆಗೆ ವಾಪಸ್ ಬರ್ತೀವಿ ಅನ್ನೋ ನಂಬಿಕೆಯೇ ನಮಗಿರುವುದಿಲ್ಲ. ಶತ್ರು ಕಂಡರೆ ಸಾಕು, ನಮ್ಮ ರೈಫಲ್ಲು ಮೊಗಳುತ್ತದೆ. ಆ ಕಡೆಯಿಂದ ಬಂದವನೇನು ಕಡ್ಲೆಕಾಯಿ ತಿಂತಾ ಇರ್ತಾನಾ? ಅವನೂ ಗುಂಡು ಹೊಡೀತಾನೆ. ಇದ್ದರೆ ಗೆಲುವು, ಸೋತರೆ ಸಾವು ಎಂದುಕೊಂಡೇ ‘ಭಾರತ್ ಮಾತಾಕಿ ಜೈ’ ಎಂಬ ಘೋಷಣೆಯೊಂದಿಗೆ ಹೋರಾಟಕ್ಕಿಳೀತೀವಿ ನಾವು. ಗೆಳೆಯಾ, ಓದ್ತಾ ಇದೀಯ ತಾನೆ?
ಇದು ಯುದ್ಧ ಕಾಲದ ಮಾತಾಯಿತು. ಅಂಥದೇನೂ ಇಲ್ಲ. ಎಲ್ಲಾ ಕೂಲ್ಕೂಲ್ ಅಂದುಕೊಂಡರೆ, ಅದೇ ವೇಳೆಗೆ ಇನ್ನೆಲ್ಲೋ ಭೂಕಂಪವಾದ, ಪ್ರವಾಹ ಬಂದ ಸುದ್ದಿ ಬರುತ್ತೆ. ತಕ್ಷಣವೇ ಅಲ್ಲಿಗೆ ಓಡಬೇಕು. ನೊಂದವರಿಗೆ ಹೆಗಲಾಗಬೇಕು. ಜೀವನದ ಹಂಗು ತೊರೆದು ಕೆಲಸ ಮಾಡಬೇಕು. ಎಷ್ಟೋ ಸಂದರ್ಭದಲ್ಲಿ ನಮ್ಮ ಅಕ್ಕ-ತಂಗಿಯರನ್ನೇ ಹೋಲುವ; ಅಣ್ಣನ ಮಕ್ಕಳ ಥರಾನೇ ಇರುವ, ಅವ್ವನಷ್ಟೇ ಸುಕ್ಕು ಸುಕ್ಕು ಮೈಯ; ಗೆಳತಿಯಷ್ಟೇ ಸುಂದರ ಮುಖದ ಶವಗಳು ಸಿಕ್ಕಿಬಿಡುತ್ತವೆ. ಆಗಲೂ ಅಷ್ಟೆ, ಒಂದರೆಗಳಿಗೆ ಊರು, ಅಲ್ಲಿನ ಬಂಧು-ಬಳಗ ನೆನಪಾಗುತ್ತಾರೆ. ಊರಲ್ಲಿ ಯಾರಿಗಾದ್ರೂ ಏನಾದ್ರೂ ಆಗಿದ್ರೆ ಅನ್ನಿಸಿದಾಗ ಜೀವ ಝಲ್ ಅಂದುಬಿಡುತ್ತೆ. ಆದರೇನು? ಆಗಲೂ ಸೈನಿಕ ಅಳುವಂತಿಲ್ಲ. ಬದುಕಿಸಲು ಬಂದವನೇ ಬಿಕ್ಕಳಿಸಲು ನಿಂತರೆ, ಬದುಕು ಕಳಕೊಂಡವರ ಗತಿ ಏನು?
ಇನ್ನೂ ಒಂದು ಮಾತಿದೆ. ನಾನೇನೋ ದೇಶ ಸೇವೆಯ ಕಾರಣದಿಂದ ಯುದ್ಧ ಮಾಡ್ತೀನಿ. ಅಕಸ್ಮಾತ್ ಯುದ್ಧ ಕೈದಿಯಾಗಿ ಸೆರೆಸಿಕ್ಕಿದೆ ಅಂದರೆ- ಭಗವಂತಾ, ಆಗಿನ ಪಾಡು ನಾಯಿಗಳಿಗೂ ಬೇಡ. ಹದಿನೆಂಟೋ, ಇಪ್ಪತ್ತೋ ವರ್ಷಗಳ ನಂತರ ಬದುಕಿ ಬಂದರೆ ಅದು ಪವಾಡ! ಅಥವಾ ಯುದ್ಧದಲ್ಲಿ ಶತ್ರುಗಳ ಗುಂಡಿಗೆ ಸಿಕ್ಕಿ ಕೈ-ಕಾಲು ಕಳೆದುಕೊಂಡರೆ ನಂತರದ ಸ್ಥಿತಿ ಘೋರಘೋರ. ಒಂದು ಕಡೇಲಿ ಸರಕಾರಗಳು ಸರಿಯಾಗಿ ನೋಡಿಕೊಳ್ಳಲ್ಲ. ಈ ಕಡೆ ಸಮಾಜದಲ್ಲೂ ಮರ್ಯಾದೆ ಸಿಗಲ್ಲ! ಒಂದು ವೇಳೆ ಯುದ್ಧಕ್ಕೆ ಹೋದವನು ಸತ್ತೇ ಹೋದರೆ-ಮುಗಿದೇ ಹೋಯಿತು. ಅವನ ಹೆಂಡತಿ- ಮಕ್ಕಳು, ಅಪ್ಪ-ಅಮ್ಮ, ಬಂಧುಗಳನ್ನು ಯಾರೂ ಕ್ಯಾರೇ ಅನ್ನುವುದೂ ಇಲ್ಲ! ಅವರ ಬದುಕು ಛಿದ್ರ ಛಿದ್ರ…
ಹೌದು ಗೆಳೆಯಾ, ಇದನ್ನೆಲ್ಲಾ ನೆನಪು ಮಾಡಿಕೊಂಡಾಗ ಛೆ, ದೇಶ ಸೇವೆಗೆ ಪ್ರತಿಫಲ ಇಷ್ಟೇನಾ ಅನ್ನಿಸುವುದಂಟು. ಶತ್ರುಗಳು, ಗೆಳೆಯರು, ಅಪರಿಚಿತರು, ಸಾಯುವುದನ್ನು ದಿನಾದಿನ ನೋಡ್ತಾನೇ ಇರ್ತೀವಲ್ಲ ಅದೇ ಕಾರಣದಿಂದ ಒಂದು ಬಗೆಯ ವೈರಾಗ್ಯ ಕೂಡ ನಮ್ಮ ಜತೆಯಾಗಿರುತ್ತೆ. ವರ್ಷದ ರಜೆಯಲ್ಲಿ ಹೆಣ್ಣು ನೋಡಲು ಹೋದರೆ ‘ಮಿಲಿಟ್ರೀಲಿ ಇರೋ ಹುಡುಗನಿಗೆ ಹೆಣ್ಣು ಕೊಡಲ್ಲ ಕಣ್ರೀ’ ಅಂತಾರಲ್ಲ ಜನ, ಆಗೆಲ್ಲ ಎಷ್ಟು ನೋವಾಗುತ್ತೆ ಗೊತ್ತಾ ಗೆಳೆಯಾ?
ಕ್ಷಮಿಸು. ಏನೇನೋ ಹೇಳಿಬಿಟ್ಟೆ. ಹಬ್ಬದ ಸಡಗರ ಹೀಗೆಲ್ಲ ಇರಬೇಕು ಎಂದು ಯೋಚಿಸ್ತಿದ್ದ ನಿನಗೆ ಭಂಗವಾಗಿರಬೇಕು.
ಮೊನ್ನೆ ಆಕಸ್ಮಿಕವಾಗಿ ಟೀವಿಯಲ್ಲಿ ಕರ್ನಾಟಕದ ಸುದ್ದಿ ಕೇಳಿದ್ದೇ ತಡ, ಊರು ನೆನಪಾಯಿತು. ಅವ್ವ ನೆನಪಾದಳು. ಅಪ್ಪ ಕಣ್ಮುಂದೆ ಬಂದ. ಯುಗಾದಿಯ ಸಂಭ್ರಮದ ಗೆಜ್ಜೆ ಸುಮ್ನೇ ಸದ್ದು ಮಾಡಿತು. ಹೇಗಿದ್ದರೂ ನೀನು ಊರಿಗೆ ಹೋಗ್ತೀಯಲ್ಲ, ಆಗ ಒಂದ್ಸಲ ನಮ್ಮ ಮನೆಗೂ ಹೋಗಿ ಬಾ ಎಂದು ಹೇಳಲು ಈ ಪತ್ರ ಬರೆದುಬಿಟ್ಟೆ. ಗೆಳೆಯಾ, ನನ್ನ ಉಸಿರಿರುವವರೆಗೂ ಭಾರತಾಂಬೆಯ ಕೂದಲೂ ಕೊಂಕದು. ಆದರೆ ಊರಲ್ಲಿದ್ದಾಳಲ್ಲ ಅಮ್ಮ, ನನಗೆ ಅವಳದ್ದೇ ಚಿಂತೆ. ಅವಳದ್ದೇ ಧ್ಯಾನ. ಅವಳ ಕಷ್ಟ-ಸುಖವನ್ನು ನೀನೊಮ್ಮೆ ವಿಚಾರಿಸಿ ಪತ್ರ ಬರಿ. ಆಕೆಯನ್ನು ನೀನೂ ಅವ್ವಾ ಎಂದೇ ಕರೀತೀಯಲ್ಲ? ನಮ್ಮ ಸಂಬಂಧ ವಿವರಿಸಲು ಇನ್ಯಾವ ಪದ ಬೇಕು? ಕಾಯ್ತಾ ಇರ್ತೀನಿ. ಪತ್ರ ಬರಿ. ಉಳಿದಂತೆ ಉಭಯ ಕುಶಲೋಪರಿ ಸಾಂಪ್ರತ. ನಮಸ್ಕಾರ…
***
ಪ್ರಿಯ ಓದುಗಾ, ಇದು ಕಾಶ್ಮೀರದ ಗಡಿಯಲ್ಲಿರುವ ಯೋಧನೊಬ್ಬನ ಪತ್ರ. ನಿರೂಪಣೆಯ ಧಾಟಿ ಬದಲಾಗಿದೆ, ಅಷ್ಟೆ. ಹೌದಲ್ಲವಾ? ಈತ ನಿಮ್ಮೂರಿನ ಒಬ್ಬ ಯೋಧನೂ ಆಗಿರಬಹುದು. ಯುಗಾದಿಗೆಂದು ಊರಿಗೆ ಹೋದಾಗ ಪ್ಲೀಸ್, ಒಮ್ಮೆ ಅವನ ಮನೆಗೆ ಹೋಗಿ ಬನ್ನಿ. ಹಾಗೆ ಮಾಡಿದರೆ, ಯೋಧನ ತಾಯಿ ಖುಷಿಯಾಗುತ್ತಾಳೆ. ಆಕೆಯ ನಗು ಯೋಧನ ಕೆಚ್ಚು ಹೆಚ್ಚಿಸುತ್ತದೆ. ಭಾರತಾಂಬೆಯ ಜತೆಗೆ ನಮ್ಮನ್ನೂ ಕಾಪಾಡುತ್ತದೆ. ನಿಜವಾದ ಯುಗಾದಿ ಎಂದರೆ ಅದು. ಅಲ್ಲವೇ?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: