ಬಿಂದಾಸ್ ಬಾಯ್ ಪುನೀತ್ಗೆ,
ಆಕಾಶದಷ್ಟು ಪ್ರೀತಿ, ಅನುರಾಗ ಮತ್ತು ಶುಭಾಶಯ.
ಹೌದಲ್ವ ಅಪ್ಪೂ, ಇವತ್ತು ನಿನ್ನ ಬರ್ತ್ಡೇ. ಅದೇ ನೆಪದಲ್ಲಿ ನೀನು ಸಖತ್ ಬ್ಯುಸಿಯಾಗಿದೀಯ. ಗೆಳೆಯರು, ಬಂಧುಗಳು, ಚಿತ್ರರಂಗದ ಗಣ್ಯರಿಂದ ಒಂದೇ ಸಮನೆ ಬರ್ತಾ ಇರೋ ಫೋನ್ ಕರೆಗೆ ಕಿವಿಯಾಗ್ತಾ ಇದೀಯ. ತುಂಬ ಸೌಜನ್ಯದಿಂದ ‘ಥ್ಯಾಂಕ್ಯೂ, ಥ್ಯಾಂಕ್ಯೂ ನಿಮ್ಮ ಪ್ರೀತಿಗೆ ಋಣಿ’ ಎಂದು ಉತ್ತರ ಹೇಳ್ತಾ ಇದೀಯ. ಈ ಸಡಗರದ ಮಧ್ಯೆಯೇ ಒಂದ್ಸಲ ಅಪ್ಪ, ಇನ್ನೊಂದ್ಸಲ ಚಿಕ್ಕಪ್ಪ ನೆನಪಾಗ್ತಾರಲ್ಲ- ಆಗ ನಿಂತ ನಿಂತಲ್ಲೇ ಕಣ್ತುಂಬಿಕೊಳ್ತಾ ಇದೀಯ. ಆಳೆತ್ತರದ ಗುಲಾಬಿ ಹಾರ, ಕೈತುಂಬಾ ಸ್ವೀಟು ಹಿಡ್ಕೊಂಡಿರೋ ಅಭಿಮಾನಿಗಳು ದೊಡ್ಡ ಖುಷಿಯಿಂದ ‘ನಿನ್ನಿಂದಲೇ ನಿನ್ನಿಂದಲೇ ಕನಸೆಲ್ಲ ನನಸಾಗಿದೆ, ನಿನ್ನಿಂದಲೇ ನಿನ್ನಿಂದಲೇ ನಮ್ ಖುಷಿಯು ಹೆಚ್ಚಾಗಿದೇ’ ಎಂದು ಹಾಡುತ್ತಿದ್ದಾರೆ. ಅವರ ಪ್ರೀತಿಗೆ ಹೇಗೆ ಪ್ರತಿಕ್ರಿಯಿಸಬೇಕೋ ಗೊತ್ತಾಗದೆ ಒಂಥರಾ ಸಂಕೋಚದಿಂದ ನಿಂತಿದೀಯಲ್ಲ ಚಿನ್ನ; ಅದನ್ನು ಕಂಡಾಗಲೇ ನಿನಗೊಂದು ಪತ್ರ ಬರೀಬೇಕು. ಹಳೆಯ ನೆನಪುಗಳ ತೋಟದಲ್ಲಿ ಬೀ ಹ್ಯಾಪಿ ನೋ ಬೀಪಿ ಅಂದುಕೊಂಡೇ ಒಮ್ಮೆ ಸುತ್ತಾಡಬೇಕು ಅನ್ನಿಸಿಬಿಡ್ತು…
****
ನಮಗೆ ಚೆನ್ನಾಗಿ ನೆನಪಿದೆ. ಮೂವತ್ತೂ ಚಿಲ್ಲರೆ ವರ್ಷಗಳ ಹಿಂದಿನ ಮಾತು. ಆಗಷ್ಟೇ ಅಣ್ಣಾವ್ರ ‘ವಸಂತಗೀತ’ ಬಿಡುಗಡೆಯಾಗಿತ್ತು. ಸಿನಿಮಾ ನೋಡಿ ಹೊರಬಂದವರೆಲ್ಲ ಹೇಳಿದ್ದುದು ಒಂದೇ ಮಾತು: ‘ರಾಜ್ಕುಮಾರ್ ಮಗಾನೂ ಪಾತ್ರ ಮಾಡಿದ್ದಾನೆ. ಸಖತ್ ಚೂಟಿ ಇದಾನೆ. ಅವ್ನು ಕೃಷ್ಣ ಸುಂದರ. ಬೊಂಬಾಟಾಗಿ ಡ್ಯಾನ್ಸು ಮಾಡಿದಾನೆ. ನೋಡೋಕೆ ಚಿಲ್ಟು ಥರಾ ಇದಾನೆ ನಿಜ. ಆದ್ರೆ ಫೈಟಿಂಗ್ ಸೀನ್ನಲ್ಲಿ ಕರಾಟೆ ತೆಗೀತಾನೆ ಕಣ್ರೀ. ಅಷ್ಟೇ ಅಲ್ಲ, ‘ಹಾಯಾದಾ ಈ ಸಂಜೆ ಆನಂದ ತುಂಬಿರಲು…’ ಅನ್ನೋ, ಹಾಡಲ್ಲಿ- ‘ಏನು ಸಂತೋಷವೋ, ಏನು ಉಲ್ಲಾಸವೋ’ ಎಂದು ಮುದ್ದಾಗಿ ಹಾಡಿದಾನೆ ಕೂಡಾ. ಅವನ ಅಭಿನಯ ಕಂಡರೆ ಬಾಚಿ ತಬ್ಕೊಂಡು ಮುದ್ದಾಡಬೇಕು ಅನಿಸುತ್ತೆ…’
ಮುಂದೆ ‘ಚಲಿಸುವ ಮೋಡಗಳು’ ಬಂತಲ್ಲ ಡಿಯರ್? ಆಗಂತೂ ‘ಕಾಣದಂತೆ ಮಾಯವಾದನೋ, ನಮ್ಮ ಶಿವ ಕೈಲಾಸ ಸೇರಿಕೊಂಡನೊ’ ಎಂಬ ನಿನ್ನ ಹಾಡು ಎಲ್ಲರಿಗೂ ಬಾಯಿಪಾಠ ಆಗಿಬಿಡ್ತು. ಆ ಹಾಡಿಗೆ ಮರುಳಾದ ಅದೆಷ್ಟೋ ಮಂದಿ ತಮ್ಮ ಮಕ್ಕಳಿಗೆ ‘ಲೋಹಿತ್’ ಅಂತಾನೇ ಹೆಸರಿಟ್ರು. ಅಣ್ಣಾವ್ರು ಮಗನ ಹೆಸರಿಟ್ಟು ಖುಷಿಪಟ್ರು. ಆನಂತರ ‘ಭಾಗ್ಯವಂತ’ ಸಿನಿಮಾದಲ್ಲಿ ‘ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ, ಚಂದ್ರ ಮೇಲೆ ಬಂದ’ ಅಂತ ನೀನು ಮುದ್ ಮುದ್ದಾಗಿ ಹಾಡಿದೆಯಲ್ಲ, ಅದು ಕಂದಮ್ಮಗಳ ಪಾಲಿಗೆ ಜೋಗುಳದ ಹಾಡೇ ಆಗಿಬಿಡ್ತು. ಆ ಸಿನಿಮಾದಲ್ಲಿ ನಿನ್ನ ಪಾತ್ರ, ನಿನ್ನ ಮುಗ್ಧತೆ ಮತ್ತು ದಿಲ್ ಪಸಂದ್ ಅಭಿನಯ ಕಂಡು ಗಾಂದಿನಗರದ ಮಂದಿ ತುಂಬಾ ಸ್ಪಷ್ಟವಾಗಿ ಹೇಳಿಬಿಟ್ರು- ಸ್ಟಾರ್ ಈಸ್ ಬಾರ್ನ್.
ಆಮೇಲಾಮೇಲೆ ‘ಬೆಟ್ಟದ ಹೂವು’ ಬಂತು. ಅದಕ್ಕೆ ರಾಷ್ಟ್ರಪ್ರಶಸ್ತಿಯ ಕಿರೀಟ ಬೇರೆ. ನಾವೆಲ್ಲ ಅದನ್ಣೇ ಮೆಲುಕು ಹಾಕ್ತಾ ಇದ್ದಾಗಲೇ ‘ಎರಡು ನಕ್ಷತ್ರಗಳು’ ಬಂದು ಹೋಯ್ತು. ನಿನಗೋಸ್ಕರ ಅಂತಾನೇ ‘ಯಾರಿವನು’ ತಯಾರಾಯ್ತು. ಅದಾದ ಎಷ್ಟೋ ವರ್ಷದ ಮೇಲೆ ಅಪ್ಪಾಜಿ ಜತೇಲಿ ನಟಿಸಿದ ‘ಪರಶುರಾಮ್’ ಬಂತು. ಆ ವೇಳೆಗೆ ನೀನಷ್ಟೇ ಅಲ್ಲ, ಹೆಸರೂ ಬದಲಾಗಿತ್ತು. ಲೋಹಿತ್ – ಪುನೀತ್ ಆಗಿದ್ದ! ಹುಡುಗಾಟಿಕೆ ಮಾಯವಾಗಿ ಜವಾಬ್ದಾರಿ ಹೆಗಲೇರಿತ್ತು. ಇದ್ದಕ್ಕಿದ್ದಂತೆಯೇ ನೀನು ಟ್ರ್ಯಾಕ್ ಬದಲಿಸಿದೆ. ಸಿನಿಮಾಕ್ಕೆ ಸಲಾಂ ಅಂದು ಬಿಜಿನೆಸ್ಗೆ ಇಳಿದುಬಿಟ್ಟೆ. ಅದೇ ಸಂದರ್ಭದಲ್ಲಿ ಒಂದಿಷ್ಟು ಫಜೀತಿಯಾಯ್ತು ನೋಡು- ಇದೇ ಜನ, ಪುನೀತು ಸಖತ್ ಒರಟ ಅಂತೆ ಕಣ್ರೀ ಎಂದು ಸುದ್ದಿ ಹಬ್ಬಿಸಿದರು!
ಥತ್, ಅದೊಂದು ಕೆಟ್ಟ ಘಳಿಗೆ ಮತ್ತು ಕಹಿ ನೆನಪು. ಬಿಟ್ಹಾಕು ದೊರೇ. ಆಮೇಲೇನಾಯ್ತು ಹೇಳು, ಒನ್ ಫೈನ್ ಡೇ ‘ಅಪ್ಪು’ ಸಿನಿಮಾದ ಮೂಲಕ ನೀನು ಬಂದೇಬಿಟ್ಟೆ. ಜನ ಖುಷಿಪಟ್ರು. ನಿನ್ನ ಫೈಟು, ಹಾಡು, ಡ್ಯಾನ್ಸು, ಸರಳತೆ, ವಿನಯ, ಹಾವ-ಭಾವ ಎಲ್ಲವನ್ನೂ ಇಷ್ಟಪಟ್ರು. ಮುಂದೆ ‘ಅಭಿ’, ‘ನಮ್ಮ ಬಸವ’, ‘ವೀರ ಕನ್ನಡಿಗ’… ಹೀಗೆ ಒಂದೊಂದೇ ಸಿನಿಮಾ ಕೊಡ್ತಾ ಹೋದೆ ನೀನು. ಆಮೇಲೆ ಅಬ್ಬಬ್ಬಬ್ಬಬ್ಬಾ ಅನ್ನುವಂಥ ‘ಆಕಾಶ್’ ಬಂತು ನೋಡು- ಜನ ಹುಚ್ಚೆದ್ದು ಕುಣಿದ್ರು. ತುಂಬಾ ಆಸೆಪಟ್ಟು ಮತ್ತೆ ಮತ್ತೆ ನೋಡಿದ್ರು. ಪಡ್ಡೆ ಹುಡುಗರಂತೂ ನಿನ್ನ ಹೆಸರನ್ನೇ ಕೈಮೇಲೆ ಹಚ್ಚೆ ಹಾಕಿಸಿಕೊಂಡರು. ತೆರೆಯ ಮೇಲೆ ರಮ್ಯಾ ಅನ್ನೋ ಸುಂದರಾಂಗಿಯ ಕಡೆ ನೋಡುತ್ತಾ- ‘ನೀನೇ ನೀನೇ ನನಗೆಲ್ಲಾ ನೀನೇ’ ಎಂದು ಹಾಡುತ್ತಿದ್ದರೆ- ಈ ಅಭಿಮಾನಿಗಳು ನಿನ್ನನ್ನೇ ಎದೆಯೊಳಗಿಟ್ಟುಕೊಂಡು- ‘ನೀನೇ ನೀನೇ ನಮಗೆಲ್ಲಾ ನೀನೇ’ ಎಂದು ಖುಷಿಯಾಗಿ ಹಾಡಲು ಶುರುವಿಟ್ಟರು. ಹೌದಲ್ವ ಅಪ್ಪೂ…
ಈಗ ಏನಾಗಿದೆ ಅಂದ್ರೆ- ನೀನು ಪವರ್ ಸ್ಟಾರ್ ಆಗಿದೀಯ. ಜಾಸ್ತಿ ಸಂಭಾವನೆ ಪಡೆಯೋ ಹೀರೋ ಎಂಬ ಪಟ್ಟ ದಕ್ಕಿದೆ. ‘ಅಪ್ಪು ಸಿನಿಮಾ ಅಂದ್ರೆ ಸ್ವೀಟ್ ಸ್ವೀಟ್. ಅಲ್ಲಿ ಅಶ್ಲೀಲ ಸಂಭಾಷಣೆ ಇರಲ್ಲ. ಎಕ್ಸ್ಪೋಸ್ ಇರಲ್ಲ. ಐಟಂ ಸಾಂಗ್ ಇರಲ್ಲ. ಡಬ್ಬಲ್ ಮೀನಿಂಗ್ ಡೈಲಾಗೂ ಇರಲ್ಲ. ಒಂದೇ ಮಾತಲ್ಲಿ ಹೇಳೋದಾದ್ರೆ-‘ಅಪ್ಪು’ ಸಿನಿಮಾಗಳು ಅಣ್ಣಾವ್ರ ಸಿನಿಮಾ ಥರಾನೇ ಇರ್ತವೆ. ಅವನ ಪ್ರತಿ ಸಿನಿಮಾದಲ್ಲೂ ಒಂದು ಸಂದೇಶ ಇರುತ್ತೆ ಎಂಬ ಮಾತು ಎಲ್ಲರಿಂದಲೂ ಕೇಳಿ ಬರ್ತಾ ಇದೆ. ಹೀಗೆ, ನಿನ್ನ ಬರ್ತ್ಡೇ ಎಂಬುದನ್ನೇ ನೆಪವಾಗಿಟ್ಟುಕೊಂಡು ಇಷ್ಟೆಲ್ಲಾ ಹೇಳಿದ ನಂತರ ಒಂದಿಷ್ಟು ಪ್ರಶ್ನೆಗಳನ್ನೂ ಕೇಳಬೇಕು ಅನ್ನಿಸ್ತಿದೆ ರಾಜಾ…
****
ನಿಂಗೇ ಗೊತ್ತಿದೆಯಲ್ಲ ದೊರೇ, ಯಾವ ಹೀರೋನೇ ಆಗಿರಲಿ, ಅವನ ಎರಡೇ ಎರಡು ಸಿನಿಮಾ ಹಿಟ್ ಆಗಿಬಿಟ್ರೆ ಸಾಕು, ಅಭಿಮಾನಿಗಳು ಗಂಟು ಬೀಳ್ತಾರೆ. ಹೋದಲ್ಲಿ ಬಂದಲ್ಲಿ ಮುತ್ತಿಗೆ ಹಾಕ್ತಾರೆ. ಕೈ ಮುಟ್ಟಿ, ಕೆನ್ನೆ ತಟ್ಟಿ, ಮುತ್ತಿಟ್ಟು, ಹಾರ ಹಾಕಿ, ಫೋಟೊ ತೆಗೆಸ್ಕಂಡು, ಆಟೊಗ್ರಾಫ್ ಕೇಳಿ, ಕೈ ಮುಗಿದು, ಕಾಲಿಗೂ ಬಿದ್ದು… ರಾಮರಾಮಾ ಅನ್ನೋ ಹಾಗೆ ಮಾಡಿಬಿಡ್ತಾರೆ. ಅದೇ ಕಾರಣದಿಂದ ಎಷ್ಟೋ ಮಂದಿ ಅಭಿಮಾನಿಗಳಿಂದ ದೂರ ಇರುವಾಗ – ನೀನು ಪವರ್ಸ್ಟಾರ್ ಅನ್ನಿಸಿಕೊಂಡ ಮೇಲೂ ಸಾಮಾನ್ಯರಲ್ಲಿ ಸಾಮಾನ್ಯನಾಗಿ ಉಳಿದಿದೀಯ. ಹಳೇ ಫ್ರೆಂಡ್ಸು, ಹಳೇ ಅಡ್ಡಾ, ತಳ್ಳುಗಾಡಿಯ ಜೋಳ-ಕಡ್ಲೆಕಾಯಿ ರೋಡ್ ಸೈಡಿನ ಪಾನಿಪುರಿ ಅಂಗಡಿ, ಯಾವತ್ತೋ ಕೈ ಕುಲುಕಿದ ಅಭಿಮಾನಿ, ಯಾರನ್ನೂ ಮರೆತಿಲ್ಲ! ಈ ಸರಳತೇನ ಅದು ಹ್ಯಾಗೆ ಕಲಿತ್ಕೊಂಡೆ ಅಪ್ಪೂ? ಪುನೀತ್-ರಮ್ಯಾ ಜೋಡೀನ ನೋಡ್ತಾ ಇದ್ರೆ ರಾಜ್-ಭಾರತಿ ಜೋಡಿ ನೆನಪಾಗುತ್ತೆ ಅಂತಾರಲ್ಲ ಜನ, ಆಗೆಲ್ಲ ಏನನ್ಸುತ್ತೆ ಅಪ್ಪೂ? ಗಾಸಿಪ್ಗಳಿಂದ ಈಗಲೂ ಮಾರು ದೂರ ಉಳಿದಿದ್ದೀಯಲ್ಲ? ಅಷ್ಟೊಂದು ಚೆನ್ನಾಗಿ ಫೈಟು ಮಾಡ್ತೀಯಲ್ಲ; ಇಡೀ ಸಿನಿಮಾನೇ ಹೆಗಲ ಮೇಲೆ ಹೊತ್ಕೊಂಡು ಬ್ಯಾಲೆನ್ಸ್ ಮಾಡ್ತೀಯಲ್ಲ… ಈ ಮ್ಯಾಜಿಕ್ ಎಲ್ಲಾ ಎಲ್ಲಿ ಕಲಿತೆ ಅಪ್ಪೂ?
ರಾಜ್ಕುಮಾರ್ ಮಗ ಅಲ್ವೆ? ಅಪ್ಪು ಕೋಟ್ಯಾಪತಿ ಕಣ್ರೀ… ನಾವೆಲ್ಲ ಹಾಗೆ ತಿಳ್ಕಂಡಿದೀವಿ. ಅಂಥ ನೀನೂ ಯಾವಾಗಾದ್ರೂ ಒಮ್ಮೆ ಜೇಬಲ್ಲಿ ಕಾಸೇ ಇಲ್ವಲ್ಲ ಅಂತ ಪರದಾಡಿದ್ದು ಇದೆಯಾ? ನಮ್ ಥರಾನೇ ಯಾವಾಗಾದ್ರೂ ಕದ್ದು ಪಿಕ್ಚರ್ಗೆ ಹೋಗಿದ್ಯಾ? ಶಿವಣ್ಣನಷ್ಟು ಅದ್ಭುತವಾಗಿ ಡ್ಯಾನ್ಸು ಮಾಡೋಕಾಗಲ್ಲ ಎಂಬ ಗಿಲ್ಟ್ ಈಗಲೂ ಕಾಡುತ್ತಾ ಇವತ್ತಿನ ಸಂಭ್ರಮದಲ್ಲಿ ಅಪ್ಪಾಜಿ ಜತೆಗಿರಬೇಕಿತ್ತು ಅನ್ನೋ ಭಾವ ಪದೇ ಪದೆ ಜತೆಯಾಗುತ್ತಾ? ನನ್ನ ಯಶಸ್ಸಿನ ಹಿಂದೆ ಅಪ್ಪಾಜಿಯ ಆಶೀರ್ವಾದ, ಅಮ್ಮನ ಹರಕೆ, ಶಿವಣ್ಣ-ರಾಘಣ್ಣರ ಒಲುಮೆ, ಅಭಿಮಾನಿಗಳ ಅಭಿಮಾನ, ಭಗವಂತನ ದಯೆ…
ಇಷ್ಟೆಲ್ಲಾ ಇದೆ ಎಂದು ಜೋರಾಗಿ ಹೇಳಬೇಕು ಅನ್ನಿಸ್ತಾ ಇದೆಯಾ?
ಅನುಮಾನವೇ ಬೇಡ. ಕನ್ನಡಿಗರಿಗೆ ನಿನ್ನ ಮೇಲೆ ದೊಡ್ಡ ಪ್ರೀತಿಯಿದೆ. ನಂಬಿಕೆಯಿದೆ. ಅಭಿಮಾನವಿದೆ. ಹಾರೈಕೆಯಿದೆ. ನಿನ್ನ ಎಲ್ಲಾ ಸಿನಿಮಾಗಳೂ ನೂರು-ನೂರು ದಿನಾನೇ ಓಡಲಿ. ನಮ್ಮ ಪುನೀತ್ ಒಂದರ ಹಿಂದೊಂದು ಪ್ರಶಸ್ತಿ ಪಡೆಯಲಿ. ಪವರ್ ಸ್ಟಾರ್ನ ಯಶೋಗಾಥೆ ಎಲ್ಲ ಪೇಪರ್ನಲ್ಲೂ ಕವರ್ಸ್ಟೋರಿ ಆಗೇ ಬರಲಿ ಎಂಬ ಆಸೆಯಿದೆ. ಹಾಗೇನೇ- ನಮ್ ಪುನೀತು ಬರೀ ರೀಮೇಕ್ ಸಿನಿಮಾದಲ್ಲಿ ಮಾಡ್ತಾನೆ ಎಂಬ ಬೇಸರವಿದೆ. ಕಾದಂಬರಿ ಆಧಾರಿತ ಸಿನಿಮಾದಲ್ಲಿ ಮಾಡಬಾರದೇಕೆ ಎಂಬ ಪ್ರಶ್ನೆಯೂ, ಆಗ್ರಹವೂ ಒಟ್ಟಿಗೇ ಇದೆ.
ಹೌದಲ್ವಾ? ನೀನು ಜಾಣ, ಬುದ್ಧಿವಂತ. ಅದೇ ಕಾರಣದಿಂದ ಮುಂದೆ ಅಭಿಮಾನಿಗಳ ಆಸೇನ ಈಡೇರಿಸಿಬಿಡು. ಒಂದು ವೇಳೆ ಇವತ್ತು ಅಪ್ಪಾಜಿ ಇದ್ದಿದ್ರೆ ನಿಂಗೆ ಕೇಕು ತಿನ್ನಿಸಿ, ಕೆನ್ನೆಗೆ ಮುತ್ತುಟ್ಟು, ಒಮ್ಮೆ ತಬ್ಬಿಕೊಂಡು- ‘ಕಂದಾ, ನಗುನಗುತ್ತಾ ಬಾಳು ನೀನು ನೂರು ವರುಷ’ ಎಂದು ಹಾಡ್ತಾ ಇದ್ರು. ಸಮಸ್ತ ಅಭಿಮಾನಿಗಳ ಪರವಾಗಿ ಅದೇ ಮಾತು ಹೇಳುತ್ತಾ ಪತ್ರ ಮುಗಿಸ್ತೇನೆ.
ಇಲ್ಲಿನ ಪ್ರಶ್ನೆಗಳಿಗೆ ಉತ್ತರಿಸುವ ನೆಪದಲ್ಲಾದ್ರೂ ಒಂದು ಫೋನ್ ಮಾಡಿದ್ರೆ ನೀನು ಜಾಣಮರಿ. ಮಾಡದಿದ್ರೂ…
ಸ್ವಲ್ಪ ಮತ್ತು ಜಾಸ್ತಿ ಪ್ರೀತಿಯಿಂದ.
Filed under: ಸಾಹಿತ್ಯ ಮತ್ತು ಇತರೆ |
ನಿಮ್ಮದೊಂದು ಉತ್ತರ