ವೀರಮಣಿ ಕಥಾ….

null

ವೀರಮಣಿ ಕಥಾ….ಅವನು ಚೆನ್ನೈನ ಹುಡುಗ. ಹೆಸರು ವೀರಮಣಿ. ಉದ್ದಕ್ಕಿದ್ದ. ಒಂದಿಷ್ಟು ದಪ್ಪಕ್ಕಿದ್ದ ಮತ್ತು ತುಂಬಾನೇ ಚೆಂದಕ್ಕಿದ್ದ. ಮಧುರವಾಗಿ ಹಾಡುತ್ತಿದ್ದ ಕೂಡಾ. ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಬೆಂಗಳೂರಿಗೆ ಬಂದವನು ಬೇಗ ಕನ್ನಡ ಕಲಿತ. ಶುದ್ಧ ಇಂಗ್ಲಿಷ್ ಕಲಿತ. ಈ ಬಡಾ ಬೆಂಗಳೂರಲ್ಲಿ ಬದುಕುವುದು ಹೇಗೆಂಬುದನ್ನೂ ಕಲಿತ.ಹಾಡು ಕೇಳುವ ಮತ್ತು ಹಾಡು ಹೇಳುವ ಅಭ್ಯಾಸವಿತ್ತಲ್ಲ? ಸೀದಾ ಜಯನಗರದ ಸಿ.ಡಿ. ಮಾರಾಟದ ಅಂಗಡಿಗೆ ಬಂದ. ಶಾಸ್ತ್ರೀಯ ಸಂಗೀತ, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಭಾವಗೀತೆ, ಭಕ್ತಿಗೀತೆ, ಜನಪದ ಗೀತೆಗಳ ಸಿ.ಡಿ.ಗಳನ್ನು ಹುಡುಕುತ್ತ ನಿಂತವನಿಗೆ ಅಂಗಡಿಯ ಕೌಂಟರಿನಲ್ಲಿ ಕೂತಿದ್ದ ಆಕೆ ಕಾಣಿಸಿದಳು. ಅವಳನ್ನು ನೋಡಿದೇ ತಡ, ಮಣಿ ಹಾಡು ಮರೆತ. ಮಾತು ಮರೆತ. ಅಂಗಡಿಯನ್ನು ಮರೆತ. ಯಾವುದೋ ಮೋಡಿಗೆ ಒಳಗಾದವನಂತೆ ಆಕೆಯ ಮುಂದೆ ಹೋಗಿ ನಿಂತು ಬಿಟ್ಟ!ಎದುರು ನಿಂತ ಚೆಲುವಾಂತ ಚೆನ್ನಿಗನನ್ನು ಕಂಡು ಆ ಬೆಳದಿಂಗಳ ಬಾಲೆಯೂ ಮೈಮರೆತಳು. ಅವರಿಬ್ಬರೂ ಮೌನವಾಗಿದ್ದರು ನಿಜ. ಆದರೆ, ಕಣ್ಣುಗಳು ಮಾತಾಡಿಕೊಂಡವು. ಹೃದಯಗಳು ಜತೆಯಾಗಿ ಮಿಡಿದವು. ಲವ್ ಅಟ್ ಫಸ್ಟ್ ಸೈಟ್ ಎಂಬುದು ಇಬ್ಬರ ಪಾಲಿಗೂ ನಿಜವಾಯಿತು. ಒಲವೆಂಬುದು ಯುಮುನೆಯಂತೆ ಹರಿಯುತ್ತಿದ್ದಾಗಲೇ ಆಕೆ ಮೆಲುವಾಗಿ ‘ಮೈ ನೇಮ್ ಈಸ್ ಗೀತಾಂಜಲಿ….’ ಅಂದಳು. ‘ಮಣಿ ಹಿಯರ್’ ಅಂದ ಈ ಭೂಪ. ಆ ನಂತರವೂ ಅವರಿಬ್ಬರೂ ಮಾತೇ ಆಡದೆ ನಿಂತಾಗ ಆ ಅಂಗಡಿಯಲ್ಲಿ ಹಾಡೊಂದು ತೇಲಿಬಂತು! “ಹೃದಯದಲಿ ಇದೇನಿದೂ… ನದಿಯೊಂದು ಓಡಿದೆ…

’ಅಂದಿನಿಂದ ವೀರಮಣಿ ದಿನವೂ ಆ ಮ್ಯೂಸಿಕ್ ಅಂಗಡಿಗೆ ಹೋಗಲು ಶುರುವಿಟ್ಟ. ಪ್ರತಿ ದಿನವೂ ಯಾವುದಾದರೊಂದು ಸಿ.ಡಿ. ಖರೀದಿಸುತ್ತಿದ್ದ, ಗೀತಾಂಜಲಿಯನ್ನು ನೋಡಿದರೆ ಸಾಕು, ಆತನ ಎದೆ ಹಗುರಾಗುತ್ತಿತ್ತು. ಮನಸು ನದಿಯಾಗುತ್ತಿತ್ತು. ಒಲವೆಂಬ ಲತೆ ಜತೆಗೇ ನಿಲ್ಲುತ್ತಿತ್ತು. ಅದೆಷ್ಟೋ ಬಾರಿ ‘ಐ ಲವ್ ಯೂ’ ಎಂಬ ಮಾತು ಬಾಯ್ತುದಿಗೆ ಬಂದು ನಿಂತು ಹೋಗುತ್ತಿತ್ತು. ‘ಐ ಲವ್‌ಯೂ’ ಅಂದ ಮರುಕ್ಷಣ ಆಕೆ ನಿರಾಕರಿಸಿಬಿಟ್ಟರೆ? ಗೆಳೆತನಕ್ಕೇ ಗುಡ್‌ಬೈ ಅಂದು ಬಿಟ್ಟರೆ? ಮಾತಾಡುವುದನ್ನೇ ನಿಲ್ಲಿಸಿ ಬಿಟ್ಟರೆ… ಇಂಥದೊಂದು ಅನುಮಾನ ಮಣಿಯನ್ನು ಸದಾ ಕಾಡುತ್ತಿತ್ತು. ಆದ್ದರಿಂದಲೇ ಆತ ತನ್ನ ಪ್ರೀತಿಯ ಬಗ್ಗೆ ಮಾತೇ ಆಡದೆ ಉಳಿದ.ಗೀತಾಂಜಲಿ ಪ್ರತಿ ದಿನವೂ ಅವನಿಗೆ ಸಿ.ಡಿ. ಪ್ಯಾಕ್ ಮಾಡಿ ಕೊಡುತ್ತಿದ್ದಳಲ್ಲ? ಆಗೆಲ್ಲ ಒಂದೊಂದು ಸಿ.ಡಿ.ಗೂ ಒಂದೊಂದು ಪುಟ್ಟ ಚೀಟಿ ಹಾಕುತ್ತಿದ್ದಳು. ಅವನನ್ನು ಬೀಳ್ಕೊಡುವ ಮುನ್ನ ಮಲ್ಲಿಗೆಯಂತೆ ನಗುತ್ತಿದ್ದಳು. ಮರುದಿನ ಮಣಿ ದೊಡ್ಡ ನಗೆಯೊಂದಿಗೆ ಅವಳೆಡೆಗೆ ಬರುತ್ತಿದ್ದ. ನೀನು ರಮಣಿ. ನಾನು ಮಣಿ ಎಂದು ನಗುತ್ತಿದ್ದ. ಅವಳಿಗೆ ಕಾಫಿ ಕುಡಿಸುತ್ತಿದ್ದ. ತಿಂಡಿ ತಿನ್ನಿಸುತ್ತಿದ್ದ. ಸುಖ-ದುಃಖ ವಿಚಾರಿಸುತ್ತಿದ್ದ. ‘ಐ ಲವ್‌ಯೂ’ ಎಂಬುದನ್ನು ಬಿಟ್ಟು ಉಳಿದೆಲ್ಲ ಮಾತುಗಳೂ ಇಬ್ಬರ ಮಧ್ಯೆ ಹೊಳೆಯಂತೆ ಹರಿದವು.ಹೀಗಿದ್ದಾಗಲೇ ಅದೊಮ್ಮೆ ಅನಿವಾರ್‍ಯವಾಗಿ ಮಣಿ ಚೆನ್ನೈಗೆ ಹೋಗಬೇಕಾಗಿ ಬಂತು. ಹೋಗುವ ಮುನ್ನ ಆತ ಗೀತಾಂಜಲಿಯನ್ನು ಕಂಡ. ವಿಷಯ ತಿಳಿಸಿದ. ಮೂರೇ ದಿನ ಅಷ್ಟೆ. ನಾಲ್ಕನೇ ದಿನ ನಿನ್ನ ಬಳಿಗೆ ಹಾರಿ ಬರ್‍ತೀನಿ, ದಿನಾದಿನ ಫೋನ್ ಮಾಡ್ತಿರು ಅಂದು ಫೋನ್ ನಂಬರು ಕೊಟ್ಟ. ಆತ ಹೋಗಿ ಒಂದು ದಿನ ಕಳೆದಿತ್ತು, ಅಷ್ಟೆ. ಗೀತೆಯಂಥ ಗೀತಾಂಜಲಿಗೆ ಅವನಿಲ್ಲದ ಕ್ಷಣ ಅಸಹನೀಯ ಅನ್ನಿಸಿತು. ಆಕೆ ಅವಸರದಿಂದ ಫೋನ್ ಮಾಡಿದಳು. ಅವನು ‘ಹಲೋ’ ಅಂದಾಕ್ಷಣ ‘ಮಣೀ, ತುಂಬ ಒಂಟಿ ಅನ್ನಿಸ್ತಿದೆ ನಂಗೆ, ಐ ಮಿಸ್ ಯೂ ಕಣೋ…’ ಅಂದು ಬಿಕ್ಕಿದಳು.ಮಣಿ ಗಾಬರಿಯಾದ. ಬಿಟ್ಟ ಬಾಣದಂತೆ ಬೆಂಗಳೂರಿಗೆ, ಅಲ್ಲಲ್ಲ, ಜಯನಗರದ ಅದೇ ಸಿ.ಡಿ. ಅಂಗಡಿಗೆ ಓಡಿಬಂದ. ಅವನನ್ನು ಕಂಡದ್ದೇ ಗೀತಾಂಜಲಿಯ ಎದೆಯಲ್ಲಿ ಗುಲಾಬಿ ಅರಳಿತ್ತು. ದೊಡ್ಡ ಸಂಭ್ರಮದಿಂದ ಅವನೆದುರು ನಿಂತಾಗ ಇಬ್ಬರ ಎದೆಯಲ್ಲೂ ಮಿಡಿದದ್ದು ಒಂದೇ ಹಾಡು: “ಮೆಲ್ಲುಸಿರೀ ಸವಿಗಾನ, ಎದೆ ಝಲ್ಲೆನೆ ಹೂವಿನ ಬಾಣ….

’ಯಾಕೋಪ್ಪ, ಚೆನ್ನೈನಿಂದ ಬಂದ ವಾರದ ನಂತರ ಮಣಿ ಮಂಕಾದ. ವಿಪರೀತ ಕೆಮ್ಮುತ್ತಿದ್ದ. ತಲೆನೋವೆಂದು ನರಳುತ್ತಿದ್ದ. ಈ ಮಧ್ಯೆಯೂ ತಪ್ಪದೆ ಸಿ.ಡಿ. ಖರೀದಿಸುತ್ತಿದ್ದ. ಗೀತಾಂಜಲಿಯನ್ನು ನಗಿಸುತ್ತಿದ್ದ. ತಾನೂ ನಲಿಯುತ್ತಿದ್ದ. ಆಗಲೂ ಗೀತಾಂಜಲಿ ಒಂದೊಂದು ಸಿ.ಡಿ. ಗೂ ಒಂದೊಂದು ಪುಟ್ಟ ಪತ್ರ ಹಾಕಿ ಪ್ಯಾಕ್ ಮಾಡುತ್ತಿದ್ದಳು. ಮೋಹಕವಾಗಿ ನಗುತ್ತಾ….ಅವತ್ತು ಮಂಗಳವಾರ. ಮಣಿ ಕೆಲಸ ಮುಗಿಸಿ, ಸಿ.ಡಿ. ಖರೀದಿಸಿ ರೂಮಿಗೆ ಬಂದು ಅರ್ಧ ಗಂಟೆಯೂ ಕಳೆದಿರಲಿಲ್ಲ. ಇದ್ದಕ್ಕಿದ್ದಂತೆ ಕೆಮ್ಮು ವಿಪರೀತವಾಯಿತು. ಮಣಿ ಆಸ್ಪತ್ರೆಗೆ ಹೋದ. ಅವನನ್ನು ಎರಡೆರಡು ಬಾರಿ ಪರೀಕ್ಷಿಸಿದ ವೈದ್ಯರು ಬೆಚ್ಚಿ ಉದ್ಗರಿಸಿದರು. ಮೈ ಗಾಡ್, ಕ್ಯಾನ್ಸರ್!ನಾನಿನ್ನು ಹೆಚ್ಚು ದಿನ ಬದುಕಲಾರೆ ಅನಿಸಿದ್ದೇ ತಡ, ಮಣಿ ಮೌನವಾದ. ಈ ಕೆಟ್ಟ ಸುದ್ದಿ ತಿಳಿಸಿ ಹೂವಿನಂಥ ಗೀತಾಂಜಲಿಗೆ ನೋವು ಕೊಡುವುದೇ ಬೇಡ. ಆಕೆ ಹೂವಿನಂಥವಳು. ದೇವರಂಥವಳು. ಅಮ್ಮನಂಥ ಪ್ರೀತಿಯವಳು. ನನ್ನ ಪ್ರೀತಿ ಅವಳಿಗೆ ಗೊತ್ತಾಗುವುದೇ ಬೇಡ. ನನ್ನ ಸಂಕಟದಿಂದ ಆಕೆ ಡಿಸ್ಟರ್ಬ್ ಆಗುವುದೂ ಬೇಡ. ಆಕೆ ಚನ್ನಾಗಿರಲಿ ಅಂದುಕೊಂಡವನೇ ಯಾರಿಗೂ ಹೇಳದೆ ಕೇಳದೆ ಚೆನ್ನೈಗೆ ಬಂದುಬಿಟ್ಟ.ಅವನ ಜತೆಯಿಲ್ಲದೆ ವಾರವಾಯಿತು. ತಿಂಗಳೂ ಕಳೆಯಿತು. ಗೀತಾಂಜಲಿ ಕೊರಗಿ, ಸೊರಗಿ, ಕರಗಿ, ಹುಚ್ಚಿಯಂತಾದಳು. ಕಡೆಗೆ ಅವನ ನಂಬರಿಗೆ ಫೋನು ಮಾಡಿ ‘ಮಣೀ, ಐಲವ್‌ಯೂ’ ಎಂದು ಚೀರಿದಳು. ಆ ಕಡೆಯಿಂದ ಉತ್ತರ ಬರಲಿಲ್ಲ. ಈ ಹುಡುಗಿ ಗಡಿಬಿಡಿಯಿಂದ ಸೀದಾ ಚೆನ್ನೈಗೇ ಧಾವಿಸಿದಳು.ಹರಸಾಹಸ ಮಾಡಿ ಅವನ ಮನೆ ಹುಡುಕಿದರೆ ಅಲ್ಲೇನಿದೆ ? ಮಣಿ ಸತ್ತುಹೋಗಿದ್ದ, ಗೀತಾಂಜಲಿ ನೀಡಿದ್ದ ಸಿ.ಡಿ.ಗಳೆಲ್ಲ ಚೆನ್ನೈನ ಅವನ ಮನೆಯಲ್ಲಿದ್ದವು. ಅವುಗಳನ್ನು ಆತ ಬಿಚ್ಚಿರಲೇ ಇಲ್ಲ. ಬದಲಿಗೆ ಒಪ್ಪವಾಗಿ ಜೋಡಿಸಿಟ್ಟು ಅವುಗಳ ಮೇಲೊಂದು ಚೀಟಿ ಇರಿಸಿದ್ದ. ಅದರಲ್ಲಿ “ಗೆಳತಿ, ನಿನ್ನೊಂದಿಗೆ ಬದುಕುವ ಆಸೆಯಿತ್ತು. ಆದರೆ ಅದನ್ನು ಹೇಳುವ ಧೈರ್‍ಯವಿರಲಿಲ್ಲ. ನಿನ್ನ ನೆನಪು ಜತೆಗಿರಬೇಕು ಅನ್ನಿಸಿತು. ಹಾಗೆಂದೇ ಈ ಸಿ.ಡಿ.ಗಳನ್ನು ಒಡೆಯಲೇ ಇಲ್ಲ. ಇಲ್ಲೆಲ್ಲ ನಿನ್ನ ಅಂಗೈನ ಗುರುತಿದೆ. ಈ ಬದುಕಿಗೆ ಗುಡ್‌ಬೈ ಹೇಳುವ ಮುನ್ನ ಕಡೆಯ ಮಾತು ಹೇಳುವುದಿದೆ-ಐ ಲವ್ ಯೂ….’ಅಂದಹಾಗೆ, ನಿನ್ನಿಂದ “ಐ ಲವ್‌ಯೂ’ ಅನ್ನಿಸ್ಕೋಬೇಕು ಅನ್ನೋ ಹಿರಿಯಾಸೆಯಿದೆ! ನಿಂಗೆ ಇಷ್ಟವಿಲ್ಲದಿದ್ರೂ…. ಪ್ಲೀಸ್, ನನ್ನ ಸಮಾಧಾನಕ್ಕಾಗಿ ಒಂದ್ಸಲ, ಒಂದೇ ಒಂದ್ಸಲ ಐ ಲವ್ ಯೂ ಅಂತೀಯ ಗೀತಾ….?ಈ ಪತ್ರ ಓದಿ ಗೀತಾಂಜಲಿ ಬಿಕ್ಕಿದಳು. ಬಿಕ್ಕುತ್ತಲೇ ಅಂದಳು-ಮಣೀ, ನಾನೂ ಅಷ್ಟೇ, ನಿನ್ನನ್ನು ಮೌನವಾಗಿ ಪ್ರೀತಿಸುತ್ತಿದ್ದೆ. ನಿಂಗೆ ದಿನಕ್ಕೊಂದು ಪ್ರೇಮ ಪತ್ರ ಬರೀತಿದ್ದೆ. ಅದನ್ನು ದಿನಾಲೂ ಸಿ.ಡಿ. ಒಳಕ್ಕೆ ಹಾಕ್ತಾ ಇದ್ದೆ. ಈ ಬದುಕು ನಿನಗಾಗಿ ಅಂದುಕೊಂಡೇ ಉಳಿದಿದ್ದೆ. ಆದರೆ,….ನೀತಿ: ಯಾರಿಗೇ ಆಗಲಿ, ಹೇಳಬೇಕು ಅನಿಸಿದ್ದನ್ನು ನೇರವಾಗಿ ಹೇಳಿಬಿಡಿ!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: