ಅದೊಂದು ಮಧ್ಯಮ ವರ್ಗದ ಕುಟುಂಬ. ಆ ಮನೆಯಲ್ಲಿದ್ದವರು ಐದೇ ಜನ. ಅಪ್ಪ-ಅಮ್ಮ, ಮಗ-ಸೊಸೆ ಮತ್ತು ಅವರ ಮುದ್ದು ಕಂದ. ಅಪ್ಪನಿಗೆ ಆಗಲೇ ೭೦ ವರ್ಷ ವಯಸ್ಸಾಗಿತ್ತು. ಮಗ ನೌಕರಿಗೆ ಹೋಗುತ್ತಿದ್ದ. ಅತ್ತೆ, ಸೊಸೆ ಅದು ಹೇಗೋ ಹೊಂದಿಕೊಂಡು ಬದುಕು ಸಾಗಿಸುತ್ತಿದ್ದರು. ಆ ಮನೆಯಲ್ಲಿ ಒಂದು ಮುದ್ದು ಕಂದ ಇತ್ತಲ್ಲ, ಅದೇ ಕಾರಣದಿಂದಾಗಿ ಯಾವ ಕಷ್ಟವೂ ಯಾರಿಗೂ ಗೊತ್ತಾಗದ ಹಾಗೆ ದಿನ ಕಳೆದು ಹೋಗುತ್ತಿತ್ತು.ಅದೊಂದು ಭಾನುವಾರದ ಸಂಜೆ. ನೌಕರಿಗೆ ರಜೆ ಇದ್ದ ಕಾರಣದಿಂದ ಮಗ ಮನೆಯಲ್ಲೇ ಇದ್ದ. ವರಾಂಡದಲ್ಲಿ ಸೋಫಾದ ಮೇಲೆ ಅಪ್ಪ-ಮಗ ಇಬ್ಬರೂ ಕೂತಿದ್ದರು. ಮಗ ಕಿವಿಗೆ ವಾಕ್‌ಮನ್ ಇಟ್ಟುಕೊಂಡು ಹಾಡು ಕೇಳುತ್ತಿದ್ದರೆ ಅಪ್ಪ ಪೇಪರ್ ಓದುತ್ತಿದ್ದರು. ಇದ್ದಕ್ಕಿದ್ದಂತೆ ಕಿಟಕಿಯಾಚೆಯಿಂದ ಯಾವುದೋ ಪಕ್ಷಿ ಕೂಗಿದಂತಾಯಿತು.
.”ಕಂದಾ, ಅದೇನಪ್ಪಾ ಸದ್ದು? ಹಕ್ಕಿ ಕೂಗ್ತಾ ಇರೋದಾ? ಯಾವ ಪಕ್ಷಿ ಅದೂ?’ ತಂದೆ ಕೇಳಿದರು.”ಅದು ಕಾಗೆ ಕಣಪ್ಪ’ ಮಗ ತಾತ್ಸಾರದಿಂದಲೇ ಉತ್ತರ ಹೇಳಿದ.ಒಂದೆರಡು ನಿಮಿಷಗಳ ನಂತರ ಆ ಪಕ್ಷಿ ಮತ್ತೆ ಕೂಗಿತು. ತಂದೆ ಮತ್ತೆ ಕೇಳಿದರು: ಕಂದಾ, ಯಾವ ಪಕ್ಷಿಯ ಕೂಗು ಅದು? “ಅದೇ ಕಣಪ್ಪಾ, ಅದು ಕಾಗೆ. ಕೇಳಿಸಿದ್ದ ತಕ್ಷಣ ನಿಂಗೆ ಅರ್ಥ ಆಗಲ್ವ?’ ಮಗ ಅದೇ ತಾತ್ಸಾರದಿಂದ ಉತ್ತರಿಸಿದ. ಐದು ನಿಮಿಷದ ನಂತರ ಮತ್ತೆ ಆ ಪಕ್ಷಿಯ ಸದ್ದು ಕಿಟಕಿಯಂಚಿನಿಂದ ಕೇಳಿಬಂತು. ತಂದೆ ಮತ್ತೆ ಪ್ರಶ್ನೆ ಕೇಳಿದರು. ಮಗ ಈ ಬಾರಿ ಛಕ್ಕನೆ ಮುಖ ಸಿಂಡರಿಸಿಕೊಂಡು “ಅದು ಕಾಗೆ, ಕಾಗೆ! ಎಷ್ಟು ಬಾರಿ ಹೇಳಬೇಕು ನಿಂಗೆ?’ ಎಂದು ಜೋರು ಮಾಡಿದ.ಎಂಟು ನಿಮಿಷ ಕಳೆದಿರಲಿಲ್ಲ. ಮತ್ತೆ ಆ ಪಕ್ಷಿಯ ಸ್ವರ ಕೇಳಿಸಿತು. ತಂದೆ, ಅದೇ ಶಾಂತ ಸ್ವರದಲ್ಲಿ ಮತ್ತೆ ಕೇಳಿದರು: “ಕಂದಾ, ಈ ಧ್ವನಿ ಯಾವ ಪಕ್ಷೀದು?’ಈ ಪ್ರಶ್ನೆ ಕೇಳಿ ಮಗನಿಗೆ ನಖಶಿಖಾಂತ ಕೋಪ ಬಂತು. ಆತ ದಢಾರನೆ ಮೇಲೆದ್ದು ಸೋಫಾವನ್ನು ಝಾಡಿಸಿ ಒದ್ದ. ನಂತರ ಕಿವಿಯಲ್ಲಿದ್ದ ಹಿಯರ್ ಫೋನ್‌ಗಳನ್ನು ಕಿತ್ತೆಸೆದು ಗಟ್ಟಿ ದನಿಯಲ್ಲಿ ಹೇಳಿದ: ಅದು ಕಾಗೆ ಕಾಗೆ ಕಾಗೆ ಕಾಗೆ ಕಾಗೆ! ಈಗಾಗ್ಲೇ ನಿಂಗೆ ಇದೇ ಮಾತನ್ನ ಮೂರು ಬಾರಿ ಹೇಳಿದ್ದೀನಿ. ಆದ್ರೂ ಮತ್ತೆ ಮತ್ತೆ ಕೇಳ್ತಾ ಇದೀಯ. ನನ್ನ ತಲೆ ತಿನ್ನಲಿಕ್ಕೆ ಅಷ್ಟು ಹೊತ್ತಿಂದ ಕಾಯ್ತಾ ಕೂತಿದ್ಯಾ? ಇವತ್ತು ನಿಂಗೆ ಅದ್ಯಾವ ದೊಡ್ಡ ರೋಗ ಬಂದಿದೆ?’ ಹೀಗೆಲ್ಲ ಕೂಗಾಡಿ ಬಾಯಿಗೆ ಬಂದಂತೆ ಮಾತಾಡಿದ. ನಂತರ ಮತ್ತೆ ಸೋಫಾದಲ್ಲಿ ಕೂತ.ಈ ತಂದೆ ಏನೂ ಮಾತಾಡಲಿಲ್ಲ. ಮೌನವಾಗಿ ಎದ್ದು ತಮ್ಮ ಕೋಣೆಗೆ ಹೋದರು. ಒಂದೆರಡು ನಿಮಿಷಗಳ ನಂತರ ನಡೆದು ಬಂದವರ ಕೈಯಲ್ಲಿ ಒಂದು ಹಳೆಯ ಡೈರಿಯಿತ್ತು. ಅದರಲ್ಲಿ ಗುರುತು ಮಾಡಿದ್ದ ಒಂದು ದಿನಾಂಕದ ಹಾಳೆಯನ್ನು ತೆಗೆದು ಮಗನ ಮುಂದಿಟ್ಟು ಸುಮ್ಮನೆ ಕೂತರು. ಅದು ಅಪ್ಪ ಬರೆದಿದ್ದ ಡೈರಿ ಎಂದು ಖಚಿತವಾದ ತಕ್ಷಣ ಮಗರಾಯ ಕುತೂಹಲದಿಂದ ಕಣ್ಣಾಡಿಸಿದ. ಅದರಲ್ಲಿ ಹೀಗಿತ್ತು: “ಇವತ್ತು ಮೂರು ವರ್ಷದ ನನ್ನ ಮಗನೊಂದಿಗೆ ಸೋಫಾದಲ್ಲಿ ಕೂತಿದ್ದೆ. ಅದೇ ವೇಳೆಗೆ ಕಾಗೆಯೊಂದು ಹಾರಿಬಂದು ಕಿಟಕಿಯ ಬಳಿ ಕೂತಿತು. ಮಗ ಕುತೂಹಲದಿಂದ “ಅಪ್ಪಾ, ಅದೇನು’ ಎಂದು ಕೇಳಿದ. ಅದು ಕಾಗೆ ಕಂದಾ ಎಂದು ಉತ್ತರ ಕೊಟ್ಟೆ. ಆ ನಂತರವೂ ಸತತ ೨೫ ಬಾರಿ “ಅಪ್ಪಾ, ಅದೇನು’ ಎಂದು ನನ್ನ ಮುದ್ದು ಮಗ ಕೇಳುತ್ತಲೇ ಇದ್ದ. ನಾನು ಒಂದೇ ಒಂದು ಬಾರಿಯೂ ಬೇಸರಿಸದೆ ಉತ್ತರ ಹೇಳಿದೆ. ಅಷ್ಟೇ ಅಲ್ಲ, ಒಂದೊಂದು ಬಾರಿ ಪ್ರಶ್ನೆ ಕೇಳಿದಾಗಲೂ ಮಗನನ್ನು ತಬ್ಬಿಕೊಂಡು ಮುತ್ತು ಕೊಟ್ಟೆ. ಅವನ ಕುತೂಹಲ ಮತ್ತು ಮುಗ್ಧ ಪ್ರಶ್ನೆ ನನಗೆ ತುಂಬಾ ಇಷ್ಟವಾಯಿತು…’ಇದೆಲ್ಲವನ್ನೂ ಓದುತ್ತಿದ್ದಂತೆ ಮಗನಿಗೆ ತನ್ನ ವರ್ತನೆ ಕುರಿತು ನಾಚಿಕೆಯಾಯಿತು. ಅಪ್ಪ ಬಾಲ್ಯದಲ್ಲಿ ತನ್ನನ್ನು ಅದೆಷ್ಟು ಪ್ರೀತಿಯಿಂದ ನೋಡಿಕೊಂಡಿದ್ದ ಎಂಬುದನ್ನು ನೆನೆದು ಹೆಮ್ಮೆಯಾಯಿತು. ಡೈರಿಯನ್ನು ಆತ ಇನ್ನಿಲ್ಲದ ಆಸೆಯಿಂದ ತಬ್ಬಿಕೊಂಡು ಗದ್ಗದನಾಗಿ ಕೇಳಿದ- ನನ್ನನ್ನು ಕ್ಷಮಿಸ್ತೀರಾ ಅಪ್ಪಾ…’
Filed under: ಸಾಹಿತ್ಯ ಮತ್ತು ಇತರೆ |
ನಿಮ್ಮದೊಂದು ಉತ್ತರ