ಬಡವರು ಹೃದಯ ಶ್ರೀಮಂತರು

ಅವನು ಲಕ್ಷಾಧಿಪತಿ. ಅವನಿಗೆ, ಮಕ್ಕಳನ್ನು ತುಂಬ ಮುದ್ದಿನಿಂದ, ತುಂಬಾ ಮಮತೆಯಿಂದ ಸಾಕಿದ್ದೇನೆ ಎಂಬ ಹಮ್ಮು. ಈ ಮಾತನ್ನೂ ಆತ ಮತ್ತೆ ಮತ್ತೆ ಮಕ್ಕಳ ಮುಂದೆ ಹೇಳುತ್ತಲೇ ಇದ್ದ. ಈತ ಎಷ್ಟೇ ಹೇಳಿದರೂ ಒಬ್ಬ ಮಗ ಮಾತ್ರ ಆ ಮಾತಿಗೂ ತನಗೂ ಸಂಬಂಧವೇ ಇಲ್ಲ ಎಂಬಂತೆ ಉಳಿದುಬಿಟ್ಟಿದ್ದ. ಅವನಿಗೆ ಹೇಗಾದರೂ ತನ್ನ ಪ್ರೀತಿ ಮತ್ತು ಶ್ರೀಮಂತಿಕೆ ಎರಡರ ಪರಿಚಯವನ್ನೂ ಮಾಡಿಕೊಡಬೇಕು ಎಂದು ಲಕ್ಷಾಧಿಪತಿ ತಂದೆಗೆ ಅನಿಸಿತು. ಈ ಸಂಬಂಧವೇ ಒಂದೆರಡು ದಿನ ಯೋಚಿಸಿದವನು, ಕಡು ಬಡವರು ಜೀವಿಸುತ್ತಿರುವ ಪ್ರದೇಶಕ್ಕೆ ಮಗನೊಂದಿಗೆ ಭೇಟಿ ಕೊಡಬೇಕು. ಅಲ್ಲಿ ಒಂದೆರಡು ದಿನ ತಂಗಿದ್ದು, ನಂತರ ವಾಪಸಾಗೋಣ. ಈ ಸಂದರ್ಭದಲ್ಲಿ ಬಡವರ ಮಕ್ಕಳ ಬವಣೆಯನ್ನು ಅರಿತು ಮಗ ತನ್ನೆಡೆಗೆ ಆರಾಧನಾ ಭಾವ ಬೆಳೆಸಿಕೊಳ್ಳುತ್ತಾನೆ ಎಂಬುದು ಆ ತಂದೆಯ ಅನಿಸಿಕೆಯಾಗಿತ್ತು.ಸರಿ, ಎರಡು ದಿನಗಳ ನಂತರ ತಂದೆ-ಮಗ ಇಬ್ಬರೂ ಪ್ರವಾಸ ಹೊರಟೇಬಿಟ್ಟರು. ಮಗನಿಗೆ ಪ್ರವಾಸದ ವಿವರ ಏನೇನೂ ಗೊತ್ತಿರಲಿಲ್ಲ. ಈ ಲಕ್ಷಾಧಿಪತಿ ತಂದೆ ಕಡುಬಡವರು ವಾಸವಿದ್ದ ಒಂದು ಹಳ್ಳಿಗೆ ಹೋಗಿ, ಅಲ್ಲಿಯೇ ನಾಲ್ಕು ದಿನ ತಂಗಿದ್ದೂ ಆಯಿತು. ನಂತರ ವಾಪಸ್ ತನ್ನ ಶ್ರೀಮಂತ ಬಂಗಲೆಗೆ ಮಗನೊಂದಿಗೆ ಬಂದ. ಪ್ರವಾಸ ಕುರಿತು ಮಗನಿಗೆ ಏನೆನ್ನಿಸಿದೆ ಎಂದು ತಿಳಿಯುವ ಆಸೆಯಾಯಿತಲ್ಲ, ಆ ಕ್ಷಣದಲ್ಲೇ ಮಗನನ್ನು ಕರೆದು ಕೇಳಿದ: ಕಂದಾ, ಮೊನ್ನೆ ಪ್ರವಾಸ ಹೋಗಿದ್ದೆವಲ್ಲ, ನಿಂಗೆ ಏನನ್ನಿಸ್ತು?’”ಅಪ್ಪಾ, ಅದೊಂದು ಅದ್ಭುತ ಅನುಭವ…’ ಅಂದ ಮಗ.”ಸರಿ. ನಿನ್ನ ಮಾತು ಒಪ್ಕೊಂಡೆ. ಪ್ರವಾಸದಲ್ಲಿ ಬಡವರು, ಅವರ ಮಕ್ಕಳು ಬದುಕುವುದನ್ನು ನೋಡಿದೆಯಲ್ಲ, ಅದರಿಂದ ಏನು ಕಲಿತುಕೊಂಡೆ?’ ಈ ತಂದೆಯ ಪ್ರಶ್ನೆ.ಅಪ್ಪಾ, ನಾನು ಆ ಪ್ರವಾಸದಿಂದ ಅದೆಷ್ಟೋ ವಿಷಯಗಳನ್ನು ತಿಳಿದುಕೊಂಡೆ. ಹೇಳ್ತಾ ಹೋಗ್ತೀನಿ ಕೇಳಿ, ಅಂದವನೇ ಹೀಗೆಂದ: “ನಾವು ಲಕ್ಷಾಧಿಪತಿಗಳು. ಆದರೇನು? ನಮ್ಮ ಮನೇಲಿ ಒಂದೇ ಒಂದು ನಾಯಿ ಇದೆ. ಆ ಹಳ್ಳಿಯಲ್ಲಿದ್ದವರು ಕಡುಬಡವರು. ಆದರೆ ಅವರ ಬಳಿ ನಾಲ್ಕು ನಾಯಿಗಳಿವೆ. ನಮ್ಮ ಬಂಗಲೆಯೊಳಗೆ ಒಂದು ಪುಟ್ಟ ಸ್ವಿಮ್ಮಿಂಗ್ ಫೂಲ್ ಇದೆ. ಆದರೆ, ಅವರ ಮನೆಯ ಹಿಂದೆ ದೊಡ್ಡ ನದಿಯೇ ಇದೆ. ನಾವು ರಾತ್ರಿ ಮಲಗಿದಾಗ ಬೆಡ್‌ರೂಂನ ಮಿಣುಕು ದೀಪ ಮಾತ್ರ ಕಾಣುತ್ತೆ. ಆದರೆ, ಆ ಬಡವರು ಬಯಲಲ್ಲಿ ಅಂಗಾತ ಮಲಗಿ ನಕ್ಷತ್ರಗಳನ್ನು ಲೆಕ್ಕ ಹಾಕ್ತಾರೆ!ನಮಗಿರೋದು ಒಂದೇ ಕಡೆ ತೋಟ. ಆದ್ರೆ ಅವರಿಗೆ ಹತ್ತಾರು ಹೊಲಗಳಿವೆ. ನಮ್ಮ ಸೇವೆಗೆ ಅಂತಾನೇ ನಾವು ಆಳುಗಳನ್ನು ಇಟ್ಕೊಂಡಿದೀವಿ. ಆದ್ರೆ ಆ ಬಡವರು ತಮಗಿಂತ ಬಡವರ ಸೇವೆಗೆ ನಿಲ್ತಾರೆ. ನಮಗೆ, ನಮ್ಮ ಸಂಪತ್ತಿಗೆ ಏನೂ ತೊಂದರೆ ಆಗದೇ ಇರಲಿ ಅಂತ ನಾವು ಮನೆಯ ಸುತ್ತ ದೊಡ್ಡ ಕಾಂಪೌಂಡ್ ಹಾಕ್ಕೊಂಡಿದೀವಿ. ಆದ್ರೆ ಆ ಬಡವರು, ಸುತ್ತಲೂ ಗೆಳೆಯರನ್ನು ಇಟ್ಕೊಂಡು ನೆಮ್ಮದಿಯ ಬದುಕು ನಡೆಸ್ತಾ ಇದಾರೆ! ನಾವು ಶ್ರೀಮಂತರ ಮಕ್ಕಳ ಜತೆ ಆಡೋದೇ ಗೌರವ ಅಂದ್ಕೊಂಡಿದೀವಿ. ಆದ್ರೆ ಆ ಬಡವರ ಮಕ್ಕಳು ಶ್ರೀಮಂತರ ಮಕ್ಕಳ ಜತೆ ಆಡೋದನ್ನು ಹೆಮ್ಮೆ ಅಂದ್ಕೊಂಡಿದಾರೆ. ಯಾರಾದ್ರೂ ಸಂಕಟಕ್ಕೆ ಸಿಕ್ಕಿ ಅಳ್ತಾ ಇದ್ರೆ ನಾವು ಕಂಡೂ ಕಾಣದವರ ಥರಾ ಹೋಗಿಬಿಡ್ತೀವಿ. ಆದ್ರೆ ಆ ಜನ, ಅದು ತಮ್ಮದೇ ಕಷ್ಟ ಅಂದುಕೊಂಡು ಸುಖ-ದುಃಖ ವಿಚಾರಿಸ್ತಾರೆ- ಹೌದಪ್ಪಾ, ನಮ್ಮಲ್ಲಿ ಶ್ರೀಮಂತಿಕೆಯಿದೆ. ಆದರೆ, ಆ ಬಡವರ ಬಳಿ ಹೃದಯ ಶ್ರೀಮಂತಿಕೆಯಿದೆ…’ ಅಂದುಬಿಟ್ಟ.ಮಗನ ಮಾತು ಕೇಳಿ ಆ ಲಕ್ಷಾಧಿಪತಿ ತಂದೆಗೆ ಕಣ್ತುಂಬಿ ಬಂತು. ಆತ ಏನೆಂದೂ ಮಾತನಾಡದೆ ಮಗನನ್ನು ಬಾಚಿ ತಬ್ಬಿಕೊಂಡ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: