ತೇಜಸ್ವಿ ಕೆಲವು ನೆನಪುಗಳು

null

ಅದು ಲಂಕೇಶರು ಪ್ರಗತಿರಂಗ ಆರಂಭಿಸಿದ್ದ ಸಂದರ್ಭ. ಪತ್ರಿಕೆಯ ಮೂಲಕ ಲಕ್ಷಾಂತರ ಓದುಗರ ಮನಸ್ಸು ಗೆದ್ದಷ್ಟೇ ಸುಲಭವಾಗಿ ಅವರ ಮತಗಳನ್ನೂ ಪಡೆಯಬಹುದು ಎಂಬ ವಿಚಿತ್ರ ಭ್ರಮೆ ಲಂಕೇಶರಿಗಿತ್ತು. ಅದೊಮ್ಮೆ ಯಾವುದೇ ವಿಷಯ ಪ್ರತಿಭಟಿಸಲು ಒಂದು ಪ್ರತಿಭಟನಾ ಸಭೆ ಏರ್ಪಡಿಸಿಯೇ ಬಿಟ್ಟರು ಲಂಕೇಶ್. ಸಭೆಗೆ ತೇಜಸ್ವಿಯವರನ್ನೂ ಆಹ್ವಾನಿಸಿದರು. ಬಸವನಗುಡಿಯ ಲಂಕೇಶ್ ಪತ್ರಿಕೆ ಕಚೇರಿಯಿಂದ ನ್ಯಾಷನಲ್ ಕಾಲೇಜಿನವರೆಗೆ ಮೆರವಣಿಗೆ ಹೋಗುವುದೆಂದು ತೀರ್ಮಾನವಾಯಿತು. ಮೆರವಣಿಗೆಗೆ ಭಾರೀ ಜನಬೆಂಬಲ ಸಿಗಲಿಲ್ಲ. ನಂತರ ಲಂಕೇಶ್ ಪತ್ರಿಕೆಗೆ ಕಚೇರಿಯಲ್ಲಿ ಗೆಳೆಯರು ಸಭೆ ಸೇರಿದಾಗ ತೇಜಸ್ವಿ ಹೇಳಿಯೇಬಿಟ್ಟರು:ರೀ ಲಂಕೇಶ್, ಏನ್ರೀ ಇದು, ನಿಮ್ಗೆ ಬುದ್ಧಿ ಗಿದ್ದಿ ಇದೆಯೇನ್ರಿ? ಈ ರಾಜಕೀಯ ಹೊಲಸೆದ್ದು ಹೋಗಿದೆ. ರಾಜಕಾರಣಿಗಳು ಕುಲಗೆಟ್ಟು ಹೋಗಿದಾರೆ. ಅವರ ಮಧ್ಯೆ ನುಗ್ಗಿ, ಹೋರಾಡ್ತೀನಿ ಅಂತೀರಲ್ಲ, ಇದೆಲ್ಲ ಆಗುವ ಹೋಗುವ ಕೆಲಸವಾ? ಇದು ಬಿಟ್ಟು ನಿಮ್ಗೆ ಬೇರೆ ಏನೂ ಕೆಲಸ ಇರಲಿಲ್ವ?* ೧೯೮೩-೮೪ರಲ್ಲಿ ನಡೆದ ಪ್ರಸಂಗ. ಆಗ ರೈತ ಸಂಘದ ಅಬ್ಬರ ಜೋರಾಗಿತ್ತು. ರೈತ ವಿದ್ಯಾರ್ಥಿ ಒಕ್ಕೂಟವೂ ಹುಟ್ಟಿಕೊಂಡಿತ್ತು. ವಿದ್ಯಾರ್ಥಿ ನಾಯಕರಿಗೆ ತೇಜಸ್ವಿಯವರನ್ನು ಸಭೆಗೆ ಕರೆ ತರಬೇಕೆಂಬ ಆಸೆ. ಅದು ಹೇಗೋ ತೇಜಸ್ವಿಯವರನ್ನು ಒಪ್ಪಿಸಿದ್ದಾಯಿತು. ರೈತ ಸಂಘದ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿ ಮುಖಂಡರು ಗಂಭೀರ ಚರ್ಚೆಯಲ್ಲಿ ಮುಳುಗಿದ್ದಾಗ ತೇಜಸ್ವಿ ಛಕ್ಕನೆ ಹೀಗೆಂದರು..””ಹೋಗ್ರೋ ಹೋಗ್ರೋ, ನಿಮ್ದೆಲ್ಲಾ ಬರೀ ಬೂಟಾಟಿಕೆ. ಈಗ ಮಾತ್ರ ಕ್ರಾಂತಿ ಕ್ರಾಂತಿ ಅಂತ ಕೊಚ್ಕೋತೀರ. ಆಮೇಲೆ ವರದಕ್ಷಿಣೆ ತಗೊಂಡು ಮದುವೆಯಾಗ್ತೀರ!’*

ಕುವೆಂಪು ಅವರ ಜನ್ಮದಿನದ ಅಂಗವಾಗಿ ೨೯, ೧೯೯೮ರಲ್ಲಿ ಕುವೆಂಪು ಸಾಹಿತ್ಯ ವಿಮರ್ಶೆಯ ಕಾರ್‍ಯಕ್ರಮ ನಡೆಯಿತು. ಅದು ನಡೆದದ್ದು ಕುಪ್ಪಳಿಯ ಕಾಡಿನ ಮಧ್ಯೆ. ಆ ಕಾರ್ಯಕ್ರಮಕ್ಕೆ ನಾಡಿನ ಹೆಸರಾಂತ ವಿಮರ್ಶಕರು ಬಂದಿದ್ದರು. ಕುವೆಂಪು ಸಾಹಿತ್ಯಕ್ಕೆ ಸಂಬಂಧಿಸಿದಂತೆ ಸಭೆಗೆ ಬಂದಿದ್ದವರು ಪ್ರಶ್ನೆ ಕೇಳಿದರು. ವಿಮರ್ಶಕರು ಇದಕ್ಕೆಲ್ಲ ತಮ್ಮದೇ “ಲೆವೆಲ್’ನ ಗ್ರಾಂಥಿಕ ಭಾಷೆಯಲ್ಲಿ ಉತ್ತರ ಕೊಟ್ಟರು. ಅಲ್ಲಿ ಒಬ್ಬ ಪ್ರೇಕ್ಷಕನಂತೆ ಕೂತಿದ್ದ ತೇಜಸ್ವಿ ತಾವೂ ಒಂದು ಪ್ರಶ್ನೆ ಹಾಕಿದರು. ತಕ್ಷಣವೇ ವರಸೆ ಬದಲಿಸಿದ ಚಿಂತಕರು ಆಡುಭಾಷೆಯಲ್ಲಿ ಉತ್ತರ ಹೇಳಿಬಿಟ್ಟರು. ಆಗ ತೇಜಸ್ವಿ- “ಎಲ್ಲ ಪ್ರಶ್ನೆಗೂ ಇದೇ ಭಾಷೇಲಿ ಉತ್ತರ ಹೇಳ್ರಯ್ಯ. ಎಲ್ಲ ಜನರಿಗೂ ಅರ್ಥವಾಗುವ ಹಾಗೆ ಬೊಗಳಿ’ ಎಂದು ಚಿಂತಕರನ್ನೆಲ್ಲ ಬೆಚ್ಚಿ ಬೀಳಿಸಿದ್ದರು.* ತೇಜಸ್ವಿಯವರ “ಕರ್ವಾಲೋ’ ಪಿಯುಸಿಗೆ ಪಠ್ಯವಾಗಿದ್ದ ಸಂದರ್ಭ. ವಯೋ ಸಹಜ ಕುತೂಹಲದ ಕಾರಣವೇ ಇರಬೇಕು-ಕರ್ವಾಲೋ ಎಲ್ಲ ವಿದ್ಯಾರ್ಥಿಗಳಿಗೂ ವಿಪರೀತ ಇಷ್ಟವಾಯಿತು. ಅದರಲ್ಲಿ ಬರುವ ಹಾರುವ ಓತಿ ಎಂಬ ಜೀವಿ ಈಗಿಲ್ಲ. ಅದು (?) ಒಂದರ ಮುಂದೆ ಆರು ಸೊನ್ನೆ ಹಾಕಿದಾಗ ಬರುತ್ತಲ್ಲ, ಅಷ್ಟು ವರ್ಷದ ಹಿಂದೆ ಬದುಕಿತ್ತು ಎಂದು ತೇಜಸ್ವಿಯವರೇನೋ ಬರೆದಿದ್ದರು. ಆದರೆ ಭದ್ರಾವತಿ-ತೀರ್ಥಹಳ್ಳಿ ಸೀಮೆಯ ಮಂಜಯ್ಯ ಎಂಬ ಕಾಲೇಜು ವಿದ್ಯಾರ್ಥಿಯೊಬ್ಬ ಹಾರುವ ಓತಿಯಂಥದೇ ಜೀವೀ (?)ಯನ್ನು ಪತ್ತೆ ಹಚ್ಚಿ ಅದನ್ನು ಹಿಡಿದೂ ಬಿಟ್ಟಿದ್ದ. ಈ ವಿಷಯವಾಗಿ ತೇಜಸ್ವಿ ಹೇಗೆ ಪ್ರತಿಕ್ರಿಯಿಸಬಹುದು ಎಂಬ ಕುತೂಹಲ ಹಲವರಿಗಿತ್ತು. ಆದರೆ ತೇಜಸ್ವಿ ಹಾರಿಕೆಯ ಉತ್ತರ ಹೇಳಿ ಜಾರಿಕೊಂಡರು.ತೇಜಸ್ವಿ ಯಾಕೆ ಹಾಗೆ ಮಾಡಿದರು? ಗೊತ್ತಾಗಲಿಲ್ಲ. ಸರಳ ಸತ್ಯ ಏನೆಂದರೆ-ಅವರ ಕಥೆಗಳು ಅರ್ಥವಾಗುತ್ತಿದ್ದವು. ಆದರೆ ಬಹಳ ಸಂದರ್ಭದಲ್ಲಿ ತೇಜಸ್ವಿಯವರು ಅರ್ಥವಾಗುತ್ತಿರಲಿಲ್ಲ…* ಕುವೆಂಪು ಅವರ ನಿಧನದ ನಂತರ ತೇಜಸ್ವಿ “ಅಣ್ಣನ ನೆನಪು’ ಬರೆಯಲು ಆರಂಭಿಸಿದರು. ಲಂಕೇಶ್ ಪತ್ರಿಕೆಯಲ್ಲಿ ಈ ಲೇಖನ ಮಾಲೆ ವಾರವಾರವೂ ಪ್ರಕಟವಾಗುತ್ತಿತ್ತು. ಕುವೆಂಪು ಅವರ ಹತ್ತು ಹಲವು ಮುಖ ಅಲ್ಲಿ ಅನಾವರಣವಾಗುತ್ತಿತ್ತು. ಶೇವಿಂಗ್ ಮಾಡಿದ ನಂತರ ಆ ಬ್ಲೇಡ್‌ನ ಮೇಲೆ ೧, ೨, ೩ ಎಂದು ಕುವೆಂಪು ಪೆನ್ಸಿಲ್‌ನಿಂದ ಬರೆಯುತ್ತಿದ್ದರು. ಒಂದು ಬ್ಲೇಡ್‌ನಿಂದ ಕನಿಷ್ಠ ನಾಲ್ಕು ಬಾರಿ ಶೇವಿಂಗ್ ಮಾಡಲೇಬೇಕು ಎಂಬುದು ಅವರ ನಿರ್ಧಾರವಾಗಿತ್ತು ಎಂದೂ ಒಮ್ಮೆ ತೇಜಸ್ವಿ ಬರೆದಿದ್ದರು.

ಆಗ ಹಿರಿಯರು ಅನ್ನಿಸಿಕೊಂಡ ಅದೆಷ್ಟೋ ಜನ-ಛೆ, ಕುವೆಂಪು ಎಷ್ಟೊಂದು ದೊಡ್ಡ ಮನುಷ್ಯ. ಅವರ ಬಗ್ಗೆ ಹೀಗೆಲ್ಲಾ ಬರೀಬಹುದಾ? ಇದು ಸರಿಯಾ? ಎಂದು ಪ್ರಶ್ನಿಸಿದ್ದರು. ತೇಜಸ್ವಿ ಬರಹವನ್ನು ಕಟುವಾಗಿ ಟೀಕಿಸಿದ್ದರು.ಆಗ ತೇಜಸ್ವಿ ಹೇಳಿದ್ದು: “ಕುವೆಂಪು ನನ್ನ ತಂದೆ. ಅವರು ನಮ್ಮ, ನಿಮ್ಮಂತೆಯೇ ಒಬ್ಬ ಸಾಮಾನ್ಯ ಮನುಷ್ಯ. ಅವರಿಗೂ ರಾಗ-ದ್ವೇಷಗಳಿದ್ದವು. ಅವರದೇ ಆದ ಬದುಕಿತ್ತು. ಇದ್ದುದನ್ನು ಇದ್ದಂತೆ ಹೇಳಿದೀನಿ. ಅವರಲ್ಲಿ ತಪ್ಪೇನು ಬಂತು? ನನ್ನ ತಂದೆಯೊಂದಿಗೆ ನನಗಿದ್ದಂಥ ಒಡನಾಟ ಈ ಸಾಹಿತಿಗಳಿಗಿತ್ತೆ…’ ಅಷ್ಟೇ, ಟೀಕಿಸುತ್ತಿದ್ದ ಬಾಯಿಗಳು ಬಂದ್ ಆದವು.ತೇಜಸ್ವಿ ಬಿ.ಎ.ಯಲ್ಲಿ ಇಂಗ್ಲಿಷಿನಲ್ಲಿ ಫೇಲಾಗಿದ್ರು. ಅವರ ತರಗತಿಯಲ್ಲಿದ್ದ ಒಟ್ಟು ವಿದ್ಯಾರ್ಥಿಗಳಲ್ಲಿ ಒಬ್ಬ ಮಾತ್ರ ತೇರ್ಗಡೆಯಾಗಿದ್ದ. ಉಳಿದವರೆಲ್ಲ ಡುಮ್ಕಿ. ಸ್ವಾರಸ್ಯವೆಂದರೆ ಎಲ್ಲರೂ ಚನ್ನಾಗಿ ಉತ್ತರ ಬರೆದಿದ್ದೇವೆಂದೇ ಭಾವಿಸಿದ್ದರು. ಅದಕ್ಕೆ ಕಾರಣ- ಪರೀಕ್ಷೆಯಲ್ಲಿ ಬಹುಮಂದಿ ಊಹಿಸಿದ ಪ್ರಶ್ನೆಗಳೇ ಇದ್ದವು. ಪರೀಕ್ಷಕರು ಬೇಕೆಂದೇ ಫೇಲ್ ಮಾಡಿದ್ದಾರೆ ಎಂದು ಎಲ್ಲ ವಿದ್ಯಾರ್ಥಿಗಳೂ ಆಗ ಕುಲಪತಿಯಾಗಿದ್ದ ಕುವೆಂಪು ಅವರಿಗೇ ದೂರು ನೀಡಿದರಂತೆ. ಕುತೂಹಲದಿಂದ ಎಲ್ಲರ ಉತ್ತರ ಪತ್ರಿಕೆಗಳನ್ನೂ ತರಿಸಿ ಪರೀಕ್ಷಿಸಿದ ನಂತರ ಕುವೆಂಪು ಹೇಳಿದ್ದು: ಅಲ್ಲಯ್ಯ ತೇಜಸ್ವೀ, ಆಗಲೇ ಡಿಗ್ರಿಗೆ ಬಂದಿದೀಯ. ನಿಂಗೆ ಯಾವ ಪದಕ್ಕೆ ಯಾವ ಸ್ಪೆಲ್ಲಿಂಗ್ ಅಂತ ಗೊತ್ತಿಲ್ಲವಾ? he, she ಎಂದು ಬರೆಯಬೇಕಾದ ಜಾಗದಲ್ಲಿ hi, shi ಎಂದು ಬರೆದಿದ್ದೀಯ? ಪರೀಕ್ಷಕರು ನಿಮಗೆಲ್ಲ ೨೭ ನಂಬರ್ ಕೊಟ್ಟು ತಪ್ಪು ಮಾಡಿದಾರೆ. ನಾನಾಗಿದ್ರೆ ನಿಮಗೆಲ್ಲ ಸೊನ್ನೆ ಕೊಡ್ತಿದ್ದೆ…* ಹೌದು. ತಮ್ಮ ಅನನ್ಯ ಕಥೆಗಳ ಮೂಲಕ ನಾವು ಕನಸು ಮನಸಿನಲ್ಲೂ ಊಹಿಸಿರದ ವಿಸ್ಮಯ ಲೋಕವೊಂದನ್ನು ತೇಜಸ್ವಿ ತೆರೆದಿಟ್ಟರು. ಅದಕ್ಕೆ ಒಂದು ಪುಟ್ಟ ದೃಷ್ಟಾಂತ:”ಒಮ್ಮೆ ನಾನು ತೋಟದಲ್ಲಿ ಹೋಗುತ್ತಿದ್ದಾಗ ಮಾಸ್ತಿಯ ಮಗ ನೆಲದ ಬಿಲದಲ್ಲಿ ಇಡೀ ಕೈ ಹೋಗುವಷ್ಟು ಆಳಕ್ಕೆ ಕೈ ಹಾಕಿ ನಾನು ನೋಡುತ್ತಿದ್ದಂತೆಯೇ ಏನನ್ನೋ ತೆಗೆದು ಗಬಕ್ಕನೆ ಬಾಯಿಗೆ ಹಾಕಿಕೊಂಡು ಅಗಿದು ತಿಂದ. ದೂರದಿಂದ ಇದನ್ನು ನೋಡಿದ ನಾನು ಏನನ್ನು ತಿಂದೆ ಎಂದು ಕೇಳಿದೆ. ಅವನು “ಈಚು ಸಾಮಿ’ ಎಂದ. ಹಾಗೆಂದರೆ ಏನೆಂದು ಗೊತ್ತಾಗದೆ ಮತ್ತೆ ಕೇಳಿದೆ: ಅಯ್ಯೋ, ಈಚು ಸಾಮೀ, ಈಚು ಅಂದ್ರೆ ಗೊತ್ತಿಲ್ವಾ? ಒಂದ್ಸಾರಿ ತೋರಿಸ್ತೀನಿ. ತಡೀರಿ’ ಎಂದ… ಅವನು ತಿಂದದ್ದೇನೆಂದು ತೇಜಸ್ವಿ ಬರೆದಿಲ್ಲ. ಈಚು ಎಂದರೇನೆಂದು ಅವರಿಗೆ ಗೊತ್ತಿರಲಿಲ್ಲವಾ? ಇರಬಹುದು. ಗೊತ್ತಿತ್ತಾ? ಹಾಗೂ ಇರಬಹುದು…ತೇಜಸ್ವಿಯವರು ನಮ್ಮೆದುರು ಹರಡಿಟ್ಟ ಅದೆಷ್ಟೋ ಪಾತ್ರ-ಪ್ರಸಂಗಗಳನ್ನು ಮರೆಯಲಾದೀತೆ?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: