ಆ ಹೆಂಗಸು ಗಂಡನೊಂದಿಗೆ ದಂತ ಚಿಕಿತ್ಸಾಲಯದೊಳಕ್ಕೆ ಗಡಿಬಿಡಿಯಿಂದ ನಡೆದು ಬಂದಳು. ರೋಗಿಗಳು ಅಂದರೆ ವೈದ್ಯರಿಗೆ ಅದೆಂಥದೋ ಪ್ರೀತಿ ತಾನೆ? ಅದೇ ಕಾರಣದಿಂದ ವೈದ್ಯರು ಬನ್ನಿ ಬನ್ನಿ. ಕೂತ್ಕೊಳ್ಳಿ, ಏನ್ಸಮಾಚಾರ ಎಂದರು.ಈಕೆ ಗಡಿಬಿಡಿಯಿಂದಲೇ ಹೇಳಿದಳು. “ನಾವು ಈ ಊರಿನವರಲ್ಲ ಡಾಕ್ಟ್ರೇ. ನಮ್ದು ಬೇರೆ ಊರು. ಇಲ್ಲಿ ಒಂದು ಮದುವೆಗೇಂತ ಬಂದಿದ್ವಿ. ಊಟ ಮುಗಿಸಿದ್ದೇ ಗೊತ್ತು. ಆವಾಗಿನಿಂದ ಹಾಳಾದ್ದು ವಿಪರೀತ ಹಲ್ಲುನೋವು ಶುರುವಾಗಿಬಿಟ್ಟಿದೆ ಡಾಕ್ಟ್ರೆ. ಅದೂ ದವಡೆ ಹಲ್ಲು. ಬೇಗ ಕಿತ್ತು ಬಿಡ್ತೀರ? ಇನ್ನು ಒಂದು ಗಂಟೆ ನಂತರ ನಮ್ಮೂರಿಗೆ ಬಸ್ ಇದೆ…’ಹಲ್ಲು ಕೀಳಲು ಡಾಕ್ಟರ್ ಸಿದ್ಧರಾದರು. ಅದಕ್ಕೂ ಮುಂಚೆ-ಹಲ್ಲಿನ ಮಹತ್ವ ವಿವರಿಸಬೇಕು ಅನ್ನಿಸಿ ಹೀಗೆಂದರು: “ನೋವು ಬಂದಿರೋದು ದವಡೆ ಹಲ್ಲಿಗೆ ಅಂತೀರ, ಹಾಗಾದ್ರೆ ಅದು ಹುಳುಕು ಬಂದಿರಬೇಕು. ಹಲ್ಲು ಮತ್ತು ಕಣ್ಣಿನ ಮಧ್ಯೆ ನೇರ ಸಂಪರ್ಕವಿದೆ. ದವಡೆಯಿಂದ ಕಣ್ಣಿನವರೆಗಿನ ಹಾದಿಯಲ್ಲಿ ಅದೆಷ್ಟೋ ಸೂಕ್ಷ್ಮ ನರಗಳಿವೆ. ಹಾಗಿರುವಾಗ ಛಕ್ ಅಂತ ಒಮ್ಮೆಗೇ ಹಲ್ಲು ಕಿತ್ರೆ ನರಗಳು ದುರ್ಬಲವಾಗಬಹುದು. ಅದರಿಂದ ಕಣ್ಣಿಗೆ ತೊಂದರೆ ಆಗಬಹುದು. ಒಂದು ಕೆಲಸ ಮಾಡೋಣ. ಮೊದಲು ಹಲ್ಲುಗಳನ್ನು ಕ್ಲೀನ್ ಮಾಡ್ತೀನಿ. ಆಮೇಲೆ ಅನಸ್ತೇಶಿಯಾ ಇಂಜಕ್ಷನ್ ಕೊಡ್ತೀನಿ. ಅದಾದ ಮೇಲೆ ಹಲ್ಲು ಕೀಳ್ತೀನಿ. ಸರೀನಾ?’ಡಾಕ್ಟರ್ ಮಾತು ಮುಗಿದದ್ದೇ ತಡ, ಆ ಹೆಂಗಸು ಹೇಳಿದಳು: “ಅಯ್ಯೋ, ಅದೆಲ್ಲಾ ರಾಮಾಯಣ ಯಾಕೆ ಡಾಕ್ಟ್ರೆ? ಹೋದ್ರೆ ಒಂದಷ್ಟು ರಕ್ತ ಹೋಗುತ್ತೆ ತಾನೆ? ಹೋಗ್ಲಿ ಬಿಡಿ. ಒಂದೆರಡು ಗಂಟೆ ತುಂಬಾ ನೋವಿರುತ್ತೆ ತಾನೆ? ಇರಲಿ ಬಿಡಿ. ಆದರೆ ಬೇಗ ಬೇಗ ಹಲ್ಲು ಕಿತ್ತು ಬಿಡಿ. ಇಕ್ಕಳ ಹಾಕಿ ಛಕ್ ಅಂತ ಎಳೆದ್ರೆ ಆಯ್ತಪ್ಪ. ಮೊದಲೇ ಹೇಳಿದೆನಲ್ಲ, ನಾವು ಊರಿಗೆ ಹೋಗಲಿಕ್ಕಿದೆ ಅಂತ, ಅದಕ್ಕೇ ಕೇಳ್ತಿರೋದು-ಬೇಗ ಹಲ್ಲು ಕಿತ್ತು ಬಿಡಿ ಡಾಕ್ಟ್ರೇ… ಅನಸ್ತೇಶಿಯಾ ಗಿನಸ್ತೇಶಿಯಾ ಏನೂ ಬೇಡ…’ತಮ್ಮ ಇಪ್ಪತ್ತು ವರ್ಷದ ವೃತ್ತಿ ಬದುಕಿನಲ್ಲಿ ಇಂಥ ಧೈರ್ಯವಂತೆಯನ್ನು ಆ ವೈದ್ಯರು ಕಂಡಿರಲಿಲ್ಲ. ಅನಸ್ತೇಶಿಯಾ ಇಂಜಕ್ಷನ್ ಕೊಡದೇ ದವಡೆ ಹಲ್ಲು ಕೀಳಿ ಎನ್ನಬೇಕಾದರೆ ಈಕೆ ಸಖತ್ ಗಟ್ಟಿಗಿತ್ತಿ ಇರಬೇಕು ಅಂದುಕೊಂಡೇ ಹೇಳಿದರು: “ಏನೇ ಹೇಳಿ ತಾಯಿ, ಧೈರ್ಯ ಅಂದ್ರೆ ನಿಮ್ದು. ನಿಮ್ಮಂಥ ಗಟ್ಟಿ ಗುಂಡಿಗೆಯ ಹೆಂಗಸನ್ನು ನಾನು ನೋಡಿಯೇ ಇಲ್ಲ. ಸರಿ, ನೀವು ಹೇಳಿದಂತೆಯೇ ಮಾಡ್ತೀನಿ. ಯಾವ ಹಲ್ಲು ನೋಯ್ತಾ ಇದೆ ತೋರಿಸ್ತೀರಾ? ಅದನ್ನು ಕಿತ್ತು ಬಿಡ್ತೀನಿ…’ಆ ಹೆಂಗಸು ತಕ್ಷಣವೇ ತನ್ನ ಗಂಡನನ್ನು ಉದ್ದೇಶಿಸಿ ಹೇಳಿದಳು: “ಹಲ್ಲು ನೋವು ಅಂತ ಬಡ್ಕೋತಿದ್ರಲ್ಲ, ಡಾಕ್ಟ್ರು ಕೇಳ್ತಾ ಇದಾರೆ. ಬೇಗ ತೋರ್‍ಸಿ. ಆ ಹಾಳಾದ್ದನ್ನು ಕಿತ್ತು ಎಸೆದು ಊರಿಗೆ ಹೋಗಿಬಿಡೋಣ…’ಈ ಮೊದಲು ಆಕೆಯ ಧೈರ್‍ಯದ ಮಾತು ಕೇಳಿ ಒಮ್ಮೆ ಸುಸ್ತಾಗಿದ್ದ ಡಾಕ್ಟರು ಹಲ್ಲು ನೋವು ಯಾರಿಗೆಂದು ತಿಳಿದ ನಂತರ ಮತ್ತೆ ಸುಸ್ತಾದರು.
Filed under: ಸಾಹಿತ್ಯ ಮತ್ತು ಇತರೆ |
ನಿಮ್ಮದೊಂದು ಉತ್ತರ