
ಈಗ ಇಬ್ಬರೂ ದೂರವಿದ್ದೇವೆ ಎಂದು ಕೊರಗಬೇಡ. ಅಗಲಿಕೆಯ ನೋವು ಪ್ರೇಮಿಗಳನ್ನು ಮತ್ತೂ ಹತ್ತಿರ ಮಾಡುತ್ತದೆ. ಪರಸ್ಪರರನ್ನು ಹೆಚ್ಚಾಗಿ ಅರ್ಥಮಾಡಿಕೊಳ್ಳುವ; ನಮ್ಮನ್ನು ನಾವೇ ನಿಗ್ರಹಿಸುವ ಶಕ್ತಿ ಕೊಡುತ್ತದೆ ಎಂಬುದನ್ನು ನೆನಪಿಟ್ಟುಕೋ. ಅನುಮಾನ ಬೇಡ. ನಾನು ಎಂದೆಂದೆಂದೆಂದೂ ನಿನ್ನವನು…ನೀನು ಪರೀಕ್ಷೆಯಲ್ಲಿ ಚೆನ್ನಾಗಿ ಬರೆದಿರುವುದನ್ನು ತಿಳಿದು ಸಂತೋಷವಾಯಿತು. ನೀನು ಮನೆಯಲ್ಲಿ ಹಿರಿಯರ ಮನ ಮೆಚ್ಚುವಂತೆ ನಡೆದುಕೊಂಡು ಸಂತೋಷದಿಂದ ವಿದ್ಯಾಭ್ಯಾಸದಲ್ಲಿ ಮುಂದುವರಿದರೆ ನನ್ನ ಪ್ರಯತ್ನಗಳು ಫಲಿಸಿದಂತೆ. ಗುಣವತಿಯಾದ ನೀನು ಈಗ ಮಾತ್ರವಲ್ಲದೆ ಮುಂದೆಯೂ ಹಾಗೆ ನಡೆಯುವಿಯೆಂದು ಭಾವಿಸಿದ್ದೇನೆ. ಹಾಗೆ ನಡೆದಾಗಲೇ ನೀನು ಗೃಹಲಕ್ಷ್ಮಿಯಾಗುವುದು; ನನ್ನ ಮನೆಯ ನಂದಾದೀಪವಾಗುವುದು…ನಿನಗೆ ಓದುವ ಸೌಲಭ್ಯ ಕಲ್ಪಿಸಿದುದರಿಂದ ನನಗೆ ಸುಖ, ಸಂತೋಷ, ಸಮಾಧಾನಗಳು ಲಭಿಸಿವೆ. ಇದು ನಮಗಿಬ್ಬರಿಗೂ ಅಗಲಿಕೆಯ ವಿರಹತಾಪ ತಂದಿದೆಯೆಂಬುದು ನಿಜ. ಅದನ್ನು ಇಬ್ಬರೂ ಒಟ್ಟಾಗಿ ಎದುರಿಸೋಣ. ಅಗಲಿಕೆಯಿಂದಾಗಿಯೇ ಮಧುರ ಮಿಲನದ ಅವಕಾಶಗಳು ಹೆಚ್ಚಿದೆಯಲ್ಲವೇ? ಪ್ರೇಮಾನುರಾಗಗಳು ಹೆಚ್ಚುವುದಕ್ಕೆ ಅದೂ ಪ್ರೇರಕ ಶಕ್ತಿಯಾಗಿಲ್ಲವೇ? ನಮಗೆ ಒಳ್ಳೆಯದನ್ನು ಮಾಡದ ಏನು ತಾನೆ, ಯಾವ ವ್ಯವಸ್ಥೆ ತಾನೆ ಜಗತ್ತಿನಲ್ಲಿದೆ? ಒಂದೊಂದರಿಂದಲೂ ಆಗುವ ಒಳಿತನ್ನು ಗಮನಿಸುವ ದೊಡ್ಡ ಮನಸ್ಸನ್ನು ಹೊಂದಿಲ್ಲದಿರುವುದೇ ನಮ್ಮ ದುಃಖದ ಮೂಲವೆಂದು ತೋರುತ್ತದೆ.
ಈಗಾಗಲೇ “ಬೆಂಗಳೂರಿಗೆ ವರ್ಗ ಮಾಡಿ’ ಎಂದು ಮೇಲಧಿಕಾರಿಗಳನ್ನು ಕೇಳಿದ್ದೇನೆ. ಇಂದಲ್ಲ ನಾಳೆ ಅಲ್ಲಿಗೆ ಬಂದೇ ಬರುತ್ತೇನೆಂಬ ಭರವಸೆ ನನಗಿದೆ.ನನಗೂ ಸದಾ ನಿನ್ನ ಹಂಬಲವೇ. ನನ್ನ ತರಗತಿಯಲ್ಲೂ ಆಗಿಂದಾಗ್ಗೆ ಮೈಮರೆತು ನಿನ್ನ ವಿಷಯವನ್ನೇ ಹೇಳುತ್ತೇನೆ. ಯಾವ ಪಾಠ ಮಾಡಬೇಕಾದರೂ ಸತಿ-ಪತಿಗಳ ವಿಷಯ ಅದರಲ್ಲಿದ್ದೇ ಇರುವುದು ಹೇಗೋ ಕಾಣಿಸುತ್ತದೆ. ಸರಿ, ತಕ್ಷಣ ಸ್ವಂತದ ಅನುಭವದ ಕಂತೆ ಬಿಚ್ಚುತ್ತೇನೆ. ವಿಷಯ ಅರ್ಥಮಾಡಿಕೊಳ್ಳಲು ಇದರಿಂದ ವಿದ್ಯಾರ್ಥಿಗಳಿಗೂ ಸುಲಭವಾಗಿದೆಯೆನ್ನು! ಹಿಂದಿನ ವರ್ಷ ಮದುವೆಯಾಗುವ ಮೊದಲು ಮಾಡಿದ ಪಾಠಗಳನ್ನೇ ಈಗ ಮತ್ತೆ ಹೇಳಲು ಹೊರಟಾಗ ಹೊಸ ಅರ್ಥ, ಹೊಸ ಅಂಶಗಳು ಕಾಣುತ್ತಿವೆ. ಜಗತ್ತೇ ಹೊಸದಾಗಿರುವಂತಿದೆ. ಪಾಠ ಆದ ನಂತರ ನನ್ನ ಒಳ್ಳೆಯ ಲೆಕ್ಚರ್ ಕೇಳಲು ನೀನಿಲ್ಲವಲ್ಲ ಎಂದು ಕೊರಗುತ್ತೇನೆ. ಕಾಲಾಯ ತಸ್ಮೈನಮಃ ಎನ್ನದೇ ಬೇರೆ ದಾರಿ ಇಲ್ಲ.ನೀನು ನನ್ನ ಹೃದಯೇಶ್ವರಿಯೂ ಹೌದು, ಚರಣದಾಸಿಯೂ ಹೌದು, ನಾನು ನಿನ್ನ ಚರಣದಾಸನೆಂದು ಒಪ್ಪುವುದಾದರೆ ಮಾತ್ರ. ಮದುವೆ ಎಂದರೆ ಯಜಮಾನ, ಯಜಮಾನಿ ಮತ್ತು ಇಬ್ಬರು ಆಳುಗಳು-ಒಟ್ಟಿನಲ್ಲಿ ಇಬ್ಬರೂ ಇರುವ ಸಂಸ್ಥೆ ತಾನೆ? ಹಲವಾರು ಬಾರಿ ಕನಸಿನಲ್ಲೂ ನಿನ್ನನ್ನು ಕಂಡು, ಕೂಡಿದೆನು. ಪ್ರೇಮಾನುರಾಗದ ಇನಿಯಳ ಸಾನ್ನಿಧ್ಯ ಯಾರಿಗೆ ತಾನೇ ಬೇಡ? ಅದರಲ್ಲೂ ನನಗೆ! ಸದಾ ನಿನ್ನ ಬಳಿಯಲ್ಲೇ ಇರಬೇಕೆಂದು ಹಂಬಲಿಸುವ…ನಿನ್ನವ
ವಿವರಿಸಿ ಹೇಳಲಾರೆ ನಂಗೆ ಬೇಜಾರಾಗಿದೆ!ಶ್ವೇತಾ,ನೇರವಾಗಿ, ಮುಖಕ್ಕೆ ಹೊಡೆದ ಹಾಗೆ ಹೇಳ್ತಾ ಇದೀನಿ. ನಾನು ಇಂಥ ವರ್ತನೆಯನ್ನು ನಿರೀಕ್ಷಿಸಿರಲಿಲ್ಲ. ನಿನ್ನ ಹಠ ಸಾಧನೆಗೆ ನನ್ನನ್ನೇ ಮರೆತು ಶಾಪಿಂಗ್ ಹೋಗ್ತೀಯ ಅಂದುಕೊಂಡಿರಲಿಲ್ಲ. ನಿನ್ನ ಗೆಳತಿಯರೊಟ್ಟಿಗೆ, ಕಾಫಿಡೇಗೆ ನಂಗೊಂದು ಮಾತೂ ಹೇಳದೆ ನಡೆದೇ ಬಿಡ್ತೀಯ ಅಂತ ನಾನು ಕಲ್ಪಿಸಿಕೊಂಡಿರಲಿಲ್ಲ. ನನ್ನನ್ನು ಒಂದು ಮಾತೂ ಕೇಳದೆ ಹೊಸ ಚೂಡಿದಾರ್ ತಗೋತೀಯ ಅಂತ… ಹೌದು ಶ್ವೇತಾ, ಹೀಗೆಲ್ಲ ನೀನು ಮಾಡಬಹುದು ಅಂತ ನಂಗೆ ಕನಸೂ ಬಿದ್ದಿರಲಿಲ್ಲ.ನಿಂಗೆ ಪ್ರಪೋಸ್ ಮಾಡಿದೆನಲ್ಲ? ಅವತ್ತೇ ಹೇಳಿಬಿಟ್ಟಿದ್ದೆ: “ನೋಡಿ ಮೇಡಂ, ನಾನು ತುಂಬಾ ಪೊಸೆಸೀವ್ ಫೆಲೋ. ಪರಮಸ್ವಾರ್ಥಿ ನಾನು. ಯಾವುದೇ ವಸ್ತು ಆಗಿರಲಿ, ನಾನು ಇಷ್ಟಪಡ್ತಿದೀನಿ ಅಂದ ಮೇಲೆ ಮುಗೀತು. ಅದು ನನ್ನದಾಗಬೇಕು. ನನಗೆ ಮಾತ್ರ ಸಿಗಬೇಕು. ಆ ವಸ್ತುವನ್ನು ಯಾರೂ ನೋಡಬಾರದು, ಮುಟ್ಟಬಾರದು, ದಕ್ಕಿಸಿಕೊಳ್ಳಬಾರದು, ಆ ಕುರಿತು ಮಾತೂ ಆಡಬಾರದು-ಹೀಗೆಲ್ಲ ಅಂದುಕೊಳ್ತೀನಿ ನಾನು. ಯಾಕಂತ ಗೊತ್ತಿಲ್ಲ, ಮೊದಲ ನೋಟಕ್ಕೇ ನೀವು ಇಷ್ಟವಾಗಿದೀರ. ನಾನು ಒಬ್ಬನೇ ಬದುಕಿದ್ರೆ ಹೇಗಿರ್‍ತೀನೇ ಗೊತ್ತಿಲ್ಲ. ಆದ್ರೆ ನೀವು ಜತೆಯಾಗ್ತೀರಿ ಅಂದ್ರೆ ಖುಷಿಯಾಗಿ ಬದುಕಬಲ್ಲೆ ಮೇಡಂ. ಪ್ಲೀಸ್, ನನ್ನನ್ನ, ನನ್ನ ಪ್ರೀತೀನ ಒಪ್ಕೊಳ್ಳಿ. ನಾನು ಪೊಸೆಸೀವ್ ಫೆಲೊ ಅನ್ನೋದು ಬಿಟ್ರೆ ಒಳ್ಳೇ ಹುಡುಗ ಮೇಡಂ. ನಂಗೇನೂ ಜಾಸ್ತಿ ಸಿಟ್ಟು ಬರಲ್ಲ. ನಾನು ಯಾರೊಂದಿಗೂ ಜಗಳ ಮಾಡಲ್ಲ, ಠೂ ಬಿಡಲ್ಲ. ಸಿಗರೇಟಿನಂಥ ದುಶ್ಚಟ ನಂಗಿನ್ನೂ ಹತ್ಕೊಂಡಿಲ್ಲ… ಸದ್ಯಕ್ಕೆ ಇಷ್ಟು ವಿವರ ಸಾಕು ಅಂದ್ಕೊತೀನಿ
ನೀವು ನನ್ನ ಪ್ರೀತೀನ ಒಪ್ಕೊಬೇಕು…’ ಅಂದಿದ್ದೆ.ನಂಗಿನ್ನೂ ಚೆನ್ನಾಗಿ ನೆನಪಿದೆ. ನನ್ನ ಸಡಬಡ ಮಾತಿಗೆ ನೀನು ಎರಡನೇ ಮಾತೂ ಹೇಳಲಿಲ್ಲ. ಒಂದು ವಾರ ಟೈಂ ಕೊಡ್ತೀರ. ಸ್ವಲ್ಪ ಯೋಚನೆ ಮಾಡಿ ಹೇಳ್ತೀನಿ ಅಂದುಬಿಟ್ಟೆ. “ಆಗಲ್ಲ’ ಅನ್ನಲಿಕ್ಕೆ ನನಗೂ ಕಾರಣ ಇರಲಿಲ್ಲವಲ್ಲ? ಆಮೇಲೆ ಒಂದು ವಾರವಲ್ಲ, ಒಂದಿಡೀ ತಿಂಗಳು ನನಗೆ ಸಿಗಲೇ ಇಲ್ಲ ನೀನು. ನಂತರ ಸಿಕ್ಕವಳ ತುಟಿಯಂಚಿನಲ್ಲಿ ಕಿರುನಗೆಯಿತ್ತು. ಮುಡಿಯಲ್ಲಿ ಗುಲಾಬಿಯ ಮೊಗ್ಗಿತ್ತು!ಹೌದು ನವೀನ್, ಐ ಲವ್ ಯು ಟೂ ಅಂದೆಯಲ್ಲ, ಆ ಕ್ಷಣದಿಂದಲೇ ನಿನ್ನನ್ನ ನನ್ನ ವಸ್ತು ಎಂದೇ ನಾನು ಭಾವಿಸಿಬಿಟ್ಟೆ. ನಿಂಗೆ ಕಾಫಿ ಬೇಕಾ? ಚಾಕೊಲೇಟ್ ಬೇಕಾ? ಐಸ್‌ಕ್ರೀಂ ಬೇಕ? ಜೀನ್ಸ್ ಬೇಕಾ? ಚೂಡಿದಾರ್ ಬೇಕಾ? ಬಿಂದಿ ಬೇಕಾ? ನಿನ್ನ ಚೆಂದುಟಿಯ ಥರದ್ದೇ ಆದ ಲಿಪ್‌ಸ್ಟಿಕ್ ಬೇಕಾ? ಫಳಫಳ ಹೊಳೆವ ವಾಚ್ ಬೇಕಾ? ಅದನ್ನೆಲ್ಲಾ ನಾನೇ ತಂದುಕೊಡಬೇಕು ಅಂದುಕೊಂಡು ಬಿಟ್ಟೆ. ಹಾಗೆಯೇ ಬದುಕಿ ಬಿಟ್ಟೆ ಕೂಡಾ. ಒಂದೊಂದ್ಸಲ ನನ್ನ ಪೊಸೆಸೀವ್‌ನೆಸ್ ಕಂಡು ನಂಗೇ ಬೇಸರ ಆಗ್ತಿತ್ತು. ಛೆ, ಛೆ, ನಾನು ಹೀಗೆಲ್ಲಾ ವರ್ತಿಸಬಾರ್‍ದು ಅಂದುಕೊಂಡಾಗಲೇ ನಿನ್ನ ಗೆಳತಿಯೊಬ್ಬಳು ಭುಜ ಮುಟ್ಟುತ್ತಿದ್ದುದು, ಯು ಲುಕ್ಸ್ ಸೋ ಸ್ವೀಟ್ ಎಂದು ಕೆನ್ನೆ ತಟ್ಟುತ್ತಿದ್ದುದು ಕಾಣ್ತಾ ಇತ್ತಲ್ಲ, ಆ ಕ್ಷಣವೇ ನಾನು ಸಿರ್ರನೆ ಸಿಡುಕ್ತಾ ಇದ್ದೆ. ನಿನ್ನನ್ನು ಹುಡುಗರಿರಲಿ, ಹುಡುಗಿಯರು ಮಾತಾಡಿಸಿದ್ರೂ ನಂಗೆ ವಿಪರೀತ ಸಿಟ್ಟು ಬರ್‍ತಾ ಇತ್ತು.ಇದೆಲ್ಲಾ ನಿಂಗೂ ಗೊತ್ತಿತ್ತು ಅಲ್ವಾ ಶ್ವೇತಾ? ಹಾಗಿದ್ರೂ ನೀನು ಮೊನ್ನೆ ಸೀದಾ ಎಂಜಿ ರೋಡ್‌ಗೆ ಹೋಗಿಬಿಟ್ಟಿದೀಯ. ಗೆಳತಿಯರ ಜೊತೆ; ಅವರ ಪಾರ್ಟನರ್‌ಗಳ ಜತೆ ಗಂಟೆಗಟ್ಟಲೆ ಹರಟೆ ಹೊಡೆದಿದೀಯ. ಅಲ್ಲಿಂದ ಸೀದಾ ಕಮರ್ಷಿಯಲ್ ಸ್ಟ್ರೀಟ್‌ಗೆ ಬಂದು ಜೀನ್ಸ್ ಚೂಡಿದಾರ್ ಖರೀದಿ ಮಾಡಿದೀಯ. ಆಮೇಲೆ ಏನೂ ಗೊತ್ತಿಲ್ಲದವಳ ಥರಾ ಒಂದು ಎಸ್ಸೆಮ್ಮೆಸ್ ಕಳಿಸಿ- ಸಾರಿ ಕಣೋ ನವೀನ್. ನಾನಾದ್ರೂ ಏನು ಮಾಡ್ಲಿ? ಹಾಳಾದ್ದು ಆಸೆ ನೋಡು, ಆಸೆಗೆ ಬಲಿಯಾಗಿ ಹೀಗೆಲ್ಲ ಮಾಡಿಬಿಟ್ಟೆ. ನಿಜ ಹೇಳ್ತಿದೀನಿ. ಕಾಫಿಡೇನಲ್ಲಿ ಆಕಸ್ಮಿಕವಾಗಿ (ನಿಜವಾ?) ನನ್ನ ಗೆಳತಿಯ ಬಾಯ್‌ಫ್ರೆಂಡ್ ಕೈ ತಾಕಿದಾಗ ಒಂಥರಾ ಆಗಿಬಿಡ್ತು. ಜೀನ್ಸ್ ತಗೊಂಡು ಬಿಲ್ ಕೊಡಲು ಹೋದಾಗ-ಕ್ಯಾಷ್ ಕೌಂಟರ್‌ನಲ್ಲಿದ್ದ ಹುಡುಗ ಛಕ್ಕನೆ ಒಮ್ಮೆ ಕಣ್ಣು ಹೊಡೆದ. ಆಗಲೂ ಒಂಥರಾ ಆಗಿಬಿಡ್ತು. ಇನ್ಮೇಲೆ ಹೀಗೆ ಮಾಡಲ್ಲ. ಐ ಯಾಮ್ ಸಾರಿ… ಅಂದಿದೀಯ.ಹೇಳು ಶ್ವೇತಾ, ನಿಂಗೆ ಇದೆಲ್ಲಾ ಬೇಕಿತ್ತಾ? ಇನ್ನು ವಿವರಿಸಲಾರೆ- ನಂಗೆ ವಿಪರೀತ ನೋವಾಗಿದೆ…-ನವೀನ್
Filed under: ಪ್ರೇಮಪತ್ರ | Leave a comment »